ಗಬ್ಬಾ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರರು ಟೋಟಲ್ ಮನೋರಂಜನೆ ನೀಡುತ್ತಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅಬ್ಬರಿಸುವುದರ ಜೊತೆಗೆ ಫೀಲ್ಡಿಂಟ್ ವೇಳೆ ಆಸೀಸ್ ಆಟಗಾರರನ್ನು ಅವರದ್ದೇ ಶೈಲಿಯಲ್ಲಿ ಕಾಲೆಳೆದು ಅಭಿಮಾನಿಗಳ ಮನ ಗೆದ್ದಿದ್ದಾರೆ.
ಆಸ್ಟ್ರೇಲಿಯಾ ತಂಡದ ಎರಡನೇ ಇನಿಂಗ್ಸ್‌ನಲ್ಲಿ ಎದುರಾಳಿ ಕೀಪರ್ ಮ್ಯಾಥ್ಯೂ ವೇಡ್ ಅವರನ್ನು ಔಟ್ ಮಾಡುವಲ್ಲಿ ಪಂತ್ ಮುಖ್ಯ ಪಾತ್ರ ವಹಿಸಿದಿದ್ದರು. ಮೊಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ವೇಡ್ ಫಿಲ್ಕ್ ಮಾಡಿದ್ದ ಚೆಂಡನ್ನು ಪಂತ್ ಚಂಗನೆ ನೆಗೆದು ಹಿಡಿದಿದ್ದರು. ಅಷ್ಟೇ ಅಲ್ಲದೆ ಕೀಪಿಂಗ್ ವೇಳೆ ಹಾಡು ಹೇಳುತ್ತಾ ಆಸೀಸ್ ನಾಯಕ ಟಿಮ್ ಪೇಯ್ನ್ ಅವರನ್ನು ಕಿಚಾಯಿಸಿದರು.
ಪಂದ್ಯದ ನಾಲ್ಕನೇ ದಿನದಾಟದಲ್ಲಿ ಕೀಪಿಂಗ್ ವೇಳೆ ಪಂತ್, “ಸ್ಪೈಡರ್ ಮ್ಯಾನ್, ಸ್ಪೈಡರ್ ಮ್ಯಾನ್ ತೂನೆ ಚುರಾಯ ಮೆರೆ ದಿಲ್ ಕಾ ಚೇನ್’ ಎಂದು ಹಾಡು ಹೇಳುತ್ತಾ ಟಿಮ್ ಪೇಯ್ನ್‌ಗೆ ಕಾಟ ಕೊಟ್ಟರು. ಭಾರತ ತಂಡ ಕಳೆದ ಬಾರಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಾಗಲೂ ಟಿಮ್ ಪೇಯ್ನ್ ಮತ್ತು ರಿಷಭ್ ಪಂತ್ ನಡುವೆ ‘ಬೇಬಿ ಸಿಟ್ಟಿಂಗ್’ ಸ್ಲೆಡ್ಜಿಂಗ್ ನಡೆದಿತ್ತು. ಆಗ ಪೇಯ್ನ್ ತಮ್ಮ ಮಗುವನ್ನು ನೋಡಿಕೊಳ್ಳಲು ಒಬ್ಬರು ಬೇಕಿದ್ದಾರೆ. ಈ ಕೆಲಸ ಮಾಡಿದರೆ ತಮ್ಮ ಪತ್ನಿಯೊಂದಿಗೆ ಸಿನಿಮಾಗೆ ಹೋಗುವುದಾಗಿ ಪಂತ್ ಅವರನ್ನು ಕೇಳಿ ಅವರ ಏಕಾಗ್ರತೆ ಭಂಗ ಮಾಡಲು ಆಸೀಸ್ ನಾಯಕ ಪ್ರಯತ್ನ ಮಾಡಿದ್ದರು.
ಈಗ ಅದಕ್ಕೆ ತಿರುಗೇಟು ನೀಡಿದ ಪಂತ್, ಆಸೀಸ್ ನಾಯಕ ಏಕಾಗ್ರತೆಗೆ ಭಂಗ ತರುವ ಸತತ ಪ್ರಯತ್ನ ಮಾಡಿದರು. ಪಂತ್ ಹಾಡು ಹೇಳಿದ ವಿಡಿಯೋ ಅಂತು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಯಿತು.
ಅಂದಹಾಗೆ ಸಿಡ್ನಿ ಟೆಸ್ಟ್‌ನಲ್ಲಿ ಆಸೀಸ್ ನಾಯಕ ಪಂದ್ಯ ಡ್ರಾ ಆಗುತ್ತಿರುವ ಸಂದರ್ಭದಲ್ಲಿ ಜಿಗುಪ್ಸೆಗೆ ಬಿದ್ದು ಭಾರತ ತಂಡದ ಪರ ಮ್ಯಾಚ್ ಸೇವಿಂಗ್ ಇನಿಂಗ್ಸ್ ಆಡಿದ ರವಿ ಚಂದ್ರನ್ ಅಶ್ವಿನ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಸ್ಲೆಡ್ಜ್ ಮಾಡಿದ್ದರು. ಆದರೆ, ಇದ್ಯಾವುದಕ್ಕೂ ಕವಡೆ ಕಿಮ್ಮತ್ತು ಸಿಗದೇ ಭಾರತೀಯ ಬ್ಯಾಟ್ಸ್‌ಮನ್‌ಗಳ ದಿಟ್ಟ ಹೋರಾಟದ ಫಲವಾಗಿ ಪಂದ್ಯ ಡ್ರಾ ಫಲಿತಾಂಶ ಕಂಡಿತ್ತು. ತಮ್ಮ ಈ ವರ್ತನೆ ಬಗ್ಗೆ ಟಿಮ್ ಪೇಯ್ನ್ ಪಂದ್ಯದ ನಂತರ ಕ್ಷಮೆ ಕೇಳಿದ್ದರು ಕೂಡ.