ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ದಾಖಲೆಯ ಮತಗಳೊಂದಿಗೆ ವಿಜಯ ಸಾಧಿಸಿರುವ ಜೋ ಬೈಡನ್ ಅವರು ಅಮೆರಿಕದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲು ಕ್ಷಣಗಣನೆ ಆರಂಭವಾಗಿದೆ. ಜೋ ಬೈಡನ್ ಅವರು ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಯಾವೆಲ್ಲ ಘೋಷಣೆ ಹೊರಡಿಸಲಿದ್ದಾರೆ ಎಂಬುದು ತೀವ್ರ ಕುತೂಹಲ ಹುಟ್ಟಿಸಿದೆ.
ಹಿಂದಿನ ಟ್ರಂಪ್ ಅವಧಿಯಲ್ಲಿ ಹೇರಲಾಗಿದ್ದ ಹಲವಾರು ನಿರ್ಬಂಧಗಳನ್ನು ಜೋ ಬೈಡನ್ ತೆರವುಗೊಳಿಸಲಿದ್ದಾರೆ. ಅದರಲ್ಲೂ, ವಲಸೆ ನೀತಿ ಮತ್ತು ಪ್ಯಾರಿಸ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಟ್ರಂಪ್ ಸರಕಾರ ಕೈಗೊಂಡಿದ್ದ ನೀತಿಗಳನ್ನು ಕೂಡಲೇ ರದ್ದುಗೊಳಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಇದಿಷ್ಟೇ ಅಲ್ಲದೆ ವಿವಾದಕ್ಕೆ ಗುರಿಯಾಗಿದ್ದ ‘ಕೀಸ್ಟೋನ್ ಎಕ್ಸೆಲ್ ಪೈಪ್‌ಲೈನ್’ನ ಪರವಾನಗಿ ರದ್ದು, ಕೊರೊನಾ ವೈರಸ್ ನಿರ್ಮೂಲನೆ ಸಲುವಾಗಿ ಅಮೆರಿಕ ಒಕ್ಕೂಟದ ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸುವುದು ಮೊದಲಾದ ಆದೇಶಗಳಿಗೆ ಟ್ರಂಪ್ ಸಹಿ ಹಾಕಲಿದ್ದಾರೆ. ಇದಲ್ಲದೆ ಟ್ರಂಪ್ ಸರ್ಕಾರ ಕೆಲವು ಮುಸ್ಲಿಂ ಪ್ರಧಾನ ರಾಷ್ಟ್ರಗಳು ಹಾಗೂ ಆಫ್ರಿಕನ್ ರಾಷ್ಟ್ರಗಳ ಮೇಲೆ ಹೇರಿದ್ದ ಪ್ರವಾಸ ನಿಷೇಧವನ್ನು ತೆರವುಗೊಳಿಸಲಿದ್ದಾರೆ.
ಹೀಗೆ ಜೋ ಬೈಡನ್ ಅವರು ತಾವು ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಕೈಗೊಳ್ಳಬೇಕಾದ ನಿರ್ದಾರಗಳ ಕರಿತು ಹಲವು ಅಜೆಂಡಾಗಳನ್ನು ಹೊಂದಿದ್ದಾರೆ. ಈ ಪೈಕಿ ಕೆಲ ಪ್ರಮುಖ ಅಜೆಂಡಾಗಳು ಹೀಗಿವೆ.
ಜೋ ಬೈಡನ್ ಅವರು ಕೂಡಲೇ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಮತ್ತೆ ಸೇರ್ಪಡೆಗೊಳ್ಳಲು ಯೋಜಿಸಿದ್ದಾರೆ. ಚೀನಾ ಪ್ರಭಾವ ಹೆಚ್ಚಿದೆ ಎಂಬ ಕಾರಣ ನೀಡಿ ಡೊನಾಲ್ಡ್ ಟ್ರಂಪ್ ಅವರು ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಗುಳಿದಿದ್ದರು. ಬೈಡನ್ ಅವರು ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯನಿರ್ವಾಹಕ ಮಂಡಳಿಯ ಸಭೆಯಲ್ಲಿ ಪಾಲ್ಗೊಳ್ಳಲು ಸಾಂಕ್ರಾಮಿಕ ರೋಗ ತಜ್ಞ ಆಂಥೋನಿ ಫೌಸಿ ಅವರನ್ನು ಅಮೆರಿಕದ ಪ್ರತಿನಿಧಿಯನ್ನು ಆಯ್ಕೆ ಮಾಡಿದ್ದಾರೆ.
ಅಮೆರಿಕದ ಹೊಸ ಅಧ್ಯಕ್ಷರು ಕೊರೊನಾ ಸೋಂಕನ್ನು ತೊಲಗಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದ್ದಾರೆ. ಇಡೀ ಅಮೆರಿಕ ಒಕ್ಕೂಟದ ಎಲ್ಲ ಸಾರ್ವಜನಿಕ ಕಟ್ಟಡಗಳಲ್ಲಿ ಮಾಸ್ಕ್ ಅನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಿದ್ದಾರೆ. ಈಗಾಗಲೇ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದ್ದರೂ, ಬೈಡನ್ ಅವರು ಇದನ್ನೊಂದು ಸವಾಲಾಗಿ ಸ್ವೀಕರಿಸಿದ್ದಾರೆ. 100 ದಿನಗಳ ಮಾಸ್ಕಿಂಗ್ ಚಾಲೆಂಜ್‌ಗೆ ಜನರನ್ನು ಆಹ್ವಾನಿಸಲಿದ್ದಾರೆ. ಅಮೆರಿಕನ್ನರು ತಮ್ಮ ಮೊದಲ 100 ದಿನಗಳ ಅವಧಿಯಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಕೋರಿದ್ದಾರೆ.
ಸಾಂಕ್ರಾಮಿಕ ರೋಗದಿಂದ ಸಂಕಷ್ಟಕ್ಕೆ ಒಳಗಾಗಿರುವ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ಆರ್ಥಿಕತೆಯ ಕುರಿತಂತೆ ಬೈಡನ್ ಹಲವು ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ. ಸ್ವತ್ತುಮರುಸ್ವಾಧೀನದ ಮೇಲಿನ ನಿಷೇಧ ಮತ್ತು ಮೊರಾಟೋರಿಯಂ ಅನ್ನು ಕನಿಷ್ಠ ಮಾರ್ಚ್ 31 ರವರೆಗೆ ವಿಸ್ತರಿಸಲು ಅವರು ಒಕ್ಕೂಟ ಸರಕಾರಗಳಿಗೆ ನಿರ್ದೇಶನ ನೀಡಲಿದ್ದಾರೆ.
ಶೇ.20ರಷ್ಟು ಬಾಡಿಗೆದಾರರು ಮತ್ತು 10 ರಲ್ಲಿ ಒಬ್ಬರು ಮನೆಮಾಲೀಕರು ತಮ್ಮ ವಂತಿಗೆಗಳನ್ನು ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದು ಬೈಡನ್ ತಂಡ ತಿಳಿಸಿದೆ. ಹೀಗೆ ಸಂಕಷ್ಟದಲ್ಲಿ ಸಿಲುಕಿರುವವರಿಗೆ ಕೂಡ 1.9 ಟ್ರಿಲಿಯನ್ ಡಾಲರ್ ಕೋವಿಡ್ ಪರಿಹಾರದಲ್ಲಿ ಹೆಚ್ಚುವರಿ ನೆರವು ಒದಗಿಸಲಿದ್ದಾರೆ.
ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಪಡೆದಿರುವ ಸಾಲದ ಮೇಲಿನ ಬಡ್ಡಿ ಮತ್ತು ಅಸಲುಗಳ ಪಾವತಿಗೆ ಮುಂದಿನ ಸೆಪ್ಟೆಂಬರ್‌ವರೆಗೆ ವಿನಾಯಿತಿ ನೀಡಲಿದ್ದಾರೆ.
ಪ್ಯಾರಿಸ್ ಒಪ್ಪಂದಕ್ಕೆ ಮತ್ತೆ ಸೇರ್ಪಡೆಗೊಳ್ಳುವುದು ಸೇರಿದಂತೆ ಹವಾಮಾನ ಬದಲಾವಣೆಯನ್ನು ಎದುರಿಸಲು ಒಬಾಮಾ ಆಡಳಿತದ ಪ್ರಯತ್ನಗಳನ್ನು ಮತ್ತೆ ಆರಂಭಿಸಲು ಜೋ ಬೈಡನ್ ಅವರು ಹಲವು ಕ್ರಮಗಳನ್ನು ಕೈಗೊಳ್ಳಲಿದ್ದಾರೆ. ಬಿಡೆನ್ ಉಪಾಧ್ಯಕ್ಷರಾಗಿದ್ದಾಗ ಮಾತುಕತೆ ನಡೆಸಿದ ಈ ಒಪ್ಪಂದದಲ್ಲಿ ‘ಜಾಗತಿಕ ಸರಾಸರಿ ತಾಪಮಾನ’ವನ್ನು ಕೈಗಾರಿಕಾ ಪೂರ್ವ ಮಟ್ಟಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಇಳಿಸುವ ಗುರಿ ಹೊಂದಲಾಗಿತ್ತು. ಇದಿಷ್ಟೇ ಅಲ್ಲದೆ ಅಮೆರಿಕಕ್ಕೆ ಸಂಬಂಧಿಸಿದಂತೆ ಇನ್ನೂ ಹಲವು ಪ್ರಮುಖ ಘೋಷಣೆಗಳನ್ನು ಹೊರಡಿಸಲಿದ್ದಾರೆ.