RCB ಯಿಂದ ಫಿಂಚ್, ದುಬೆ ಔಟ್ – ನಮ್ಮ ಬೆಂಗಳೂರು ಉಳಿಸಿಕೊಂಡಿರುವ 12 ಆಟಗಾರರು ಇವರೇ?

0
32

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಆರಂಭಿಕ ಬ್ಯಾಟ್ಸ್‌ಮನ್‌ ಆರೋನ್‌ ಫಿಂಚ್‌, ಆಲ್‌ರೌಂಡರ್‌ ಶಿವಂ ದುಬೆ ಹಾಗೂ ಕ್ರಿಸ್‌ ಮಾರಿಸ್‌ ಸೇರಿದಂತೆ ಹಲವರನ್ನು 2021ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಹರಾಜಿಗೆ ಬಿಡುಗಡೆಗೊಳಿಸಿದೆ.
ಆಸ್ಟ್ರೇಲಿಯಾ ಸೀಮಿತ ಓವರ್‌ಗಳ ತಂಡದ ನಾಯಕ ಆರೋನ್‌ ಫಿಂಚ್‌ ಅವರನ್ನು 13ನೇ ಆವೃತ್ತಿಗೆ 4.8 ಕೋಟಿ ರೂ. ನೀಡಿ ಆರ್‌ಸಿಬಿ ಖರೀದಿಸಿತ್ತು. ಆದರೆ, ಬಲಗೈ ಬ್ಯಾಟ್ಸ್‌ಮನ್‌ ಕೇವಲ 268 ರನ್‌ಗಳಿಗೆ ಸೀಮಿತರಾದರು. ಇನ್ನು ದಕ್ಷಿಣ ಆಫ್ರಿಕಾ ಆಲ್‌ರೌಂಡರ್‌ ಕ್ರಿಸ್‌ ಮಾರಿಸ್‌ ಅವರನ್ನು 10 ಕೋಟಿ ರೂ.ಗೆ ಖರೀದಿಸಲಾಗಿತ್ತು. ಆದರೆ, ಅವರು 11 ವಿಕೆಟ್ ಪಡೆದು‌, 34 ರನ್‌ ಗಳಿಸಿದ್ದರು.
2019ರ ಐಪಿಎಲ್‌ ಹರಾಜಿನಲ್ಲಿ 5 ಕೋಟಿ ರೂ. ಗಳಿಗೆ ಆರ್‌ಸಿಬಿಗೆ ಖರೀದಿಯಾಗಿದ್ದ ಆಲ್‌ರೌಂಡರ್‌ ಶಿವಂ ದುಬೆ, 2020ರಲ್ಲಿ ಟೂರ್ನಿಯಲ್ಲಿ 129 ರನ್‌ ಗಳಿಸಿ, ಕೇವಲ 4 ವಿಕೆಟ್‌ ಪಡೆದು ನಿರಾಸೆ ಮೂಡಿಸಿದ್ದರು.
ಮೊಯಿನ್‌ ಅಲಿ, ಇಸುರು ಉದಾನ, ಉಮೇಶ್‌ ಯಾದವ್‌, ಡೆಲ್‌ ಸ್ಟೇನ್(ವಿಥ್‌ಡ್ರಾ), ಪಾರ್ಥಿವ್‌ ಪಟೇಲ್‌(ನಿವೃತ್ತಿ), ಪವನ್‌ ನೇಗಿ ಹಾಗೂ ಗುರುಕೀರತ್‌ ಸಿಂಗ್‌ ಮಾನ್‌ ಬಿಡುಗಡೆಯಾದ ಇನ್ನುಳಿದ ಆಟಗಾರರಾಗಿದ್ದಾರೆ.
ಮೂರು ವರ್ಷಗಳ ಬಳಿಕ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ 2020ರ ಆವೃತ್ತಿಯಲ್ಲಿ ಪ್ಲೇಆಫ್ಸ್‌ಗೆ ಅರ್ಹತೆ ಪಡೆದಿತ್ತು. ಲೀಗ್‌ ಹಂತದಲ್ಲಿ 7 ಪಂದ್ಯಗಳಲ್ಲಿ ಗೆದ್ದ ವಿರಾಟ್‌ ಕೊಹ್ಲಿ ನಾಯಕತ್ವದ ಆರ್‌ಸಿಬಿ, ಪ್ಲೇಆಫ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿತ್ತು. ಆದರೆ, ಎಲಿಮಿನೇಟರ್‌ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು.
13ನೇ ಆವೃತ್ತಿಯಲ್ಲಿ ಆರ್‌ಸಿಬಿ ಪರ ವೈಯಕ್ತಿಕ ಗರಿಷ್ಠ ಸ್ಕೋರರ್‌ ಆಗಿದ್ದ ದೇವದತ್‌ ಪಡಿಕ್ಕಲ್‌ ತಂಡದಲ್ಲಿ ತಮ್ಮ ಸ್ಥಾನವನ್ನು ಈಗಾಗಲೇ ಗಟ್ಟಿ ಮಾಡಿಕೊಂಡಿದ್ದಾರೆ. ಕರ್ನಾಟಕ ಮೂಲದ ಆರಂಭಿಕ ಬ್ಯಾಟ್ಸ್‌ಮನ್‌ 124.80 ಸ್ಟ್ರೈಕ್‌ರೇಟ್‌ನೊಂದಿಗೆ 473 ರನ್‌ ಸಿಡಿಸಿದ್ದರು.
ಪ್ರತಿ ಆವೃತ್ತಿಯಲ್ಲಿಯೂ ಆರ್‌ಸಿಬಿ ಪರ ಸ್ಥಿರ ಪ್ರದರ್ಶನ ತೋರುತ್ತಿರುವ ನಾಯಕ ವಿರಾಟ್‌ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ 2020ರ ಟೂರ್ನಿಯಲ್ಲಿ ಕ್ರಮವಾಗಿ 466 ಮತ್ತು 454 ರನ್‌ ದಾಖಲಿಸಿದ್ದಾರೆ. ಬೌಲಿಂಗ್‌ ವಿಭಾಗದಲ್ಲಿ 21 ವಿಕೆಟ್‌ ಕಿತ್ತಿದ್ದ ಯುಜ್ವೇಂದ್ರ ಚಹಲ್‌, ಅವರು ನಿರೀಕ್ಷೆಯಂತೆ ತಂಡದ ಕೀ ಸ್ಪಿನ್ನರ್‌ ಆಗಿ ಉಳಿದುಕೊಂಡಿದ್ದಾರೆ. ಒಟ್ಟಾರೆ ಆರ್‌ಸಿಬಿ 14ನೇ ಆವೃತ್ತಿಗೆ 12 ಆಟಗಾರರನ್ನು ಉಳಿಸಿಕೊಂಡಿದೆ.
ವಿರಾಟ್‌ ಕೊಹ್ಲಿ(ನಾಯಕ), ಎಬಿ ಡಿವಿಲಿಯರ್ಸ್, ದೇವದತ್‌ ಪಡಿಕ್ಕಲ್‌, ಯುಜ್ವೇಂದ್ರ ಚಹಲ್‌, ವಾಷಿಂಗ್ಟನ್‌ ಸುಂದರ್‌, ಜಾಶ್‌ ಫಿಲಿಪ್‌, ಮೊಹಮ್ಮದ್‌ ಸಿರಾಜ್‌, ನವದೀಪ್‌ ಸೈನಿ, ಕೇನ್‌ ರಿಚರ್ಡ್‌ಸನ್‌, ಪವನ್‌ ದೇಶ್‌ಪಾಂಡೆ, ಆಡಂ ಝಾಂಪ, ಶಹಬಾಝ್‌ ಅಹ್ಮದ್‌

LEAVE A REPLY

Please enter your comment!
Please enter your name here