ಮನುಷ್ಯನೇ ಮಾಡಿದ ತಪ್ಪಿಗೆ ಸಂಕಷ್ಟಕ್ಕೆ ಸಿಲುಕುವ ಕಾಲ ಸನ್ನಿಹಿತವಾಗಿದೆ. ಬರ, ಬಿಸಿಲು, ಎಲ್ಲವನ್ನೂ ಮೀರಿಸುವಂತೆ ಇದೀಗ ಸಮುದ್ರ ಭೋರ್ಗರೆಯುವುದು, ಅಬ್ಬರಿಸಿ ಎದ್ದು ಬರುವುದು ನಿಶ್ಚಿತವಾಗಿದೆ. ಸಾಗರದ ಮುಂದೆ ಭೂಮಿ ಒಂದು ಮುಷ್ಟಿಯಷ್ಟಿದೆ ಅಷ್ಟೆ..! ಸಮುದ್ರ ಎದ್ದುಬಂದರೇ ಭೂಮಿ ಸಂಪೂರ್ಣ ಮುಚ್ಚಿಹೋಗುತ್ತದೆ. ಆದರೆ ಭೂಮಿಯ ರಚನೆ ಅಂತಹ ಸಾಧ್ಯತೆಗಳನ್ನು ಇಲ್ಲವಾಗಿಸಿದೆ. ಆದರೆ ಆಕಾಶದಲ್ಲಿ ಪ್ರಖಂಡನಾಗುತ್ತಿರುವ ಸೂರ್ಯ ನೇರವಾಗಿ ಈಗ ಭೂಮಿಗೆ ಚುಂಬಿಸುತ್ತಿದ್ದಾನೆ. ತಾಪಮಾನವನ್ನು ತಾಳಲಾಗದಷ್ಟು ಸುಡುತ್ತಿದ್ದಾನೆ. ಮೊನ್ನೆ ಮೊನ್ನೆಯಷ್ಟೇ ರಾಜಸ್ತಾನದಲ್ಲಿ ತಾಪಮಾನ 51 ಡಿಗ್ರಿಯನ್ನು ತಲುಪಿತ್ತು. ಇದೀಗ ವಿಶ್ವಸಂಸ್ಥೆ, `ತಾಪಮಾನದಿಂದ ಸಮುದ್ರಮಟ್ಟ ಏರುತ್ತಿದೆ. ಇದೇ ರೀತಿ ಮುಂದುವರಿದರೇ 2050ರವೇಳೆಗೆ ಕೋಲ್ಕತ್ತಾ, ಮುಂಬೈ ಸೇರಿದಂತೆ ಜಗತ್ತಿನ ಅನೇಕ ಸಿಟಿಗಳು ಮುಳುಗಡೆಯಾಗಲಿದೆ’ ಎಂದಿದೆ.
ಹವಾಮಾನ ಬದಲಾವಣೆ ದುಷ್ಪರಿಣಾಮ ಕುರಿತು ವಿಶ್ವಸಂಸ್ಥೆ ನೀಡಿರುವ ಗಂಭೀರ ಎಚ್ಚರಿಕೆಯಿದು. 2050ರ ವೇಳೆಗೆ ಬರೀ ಭಾರತದಲ್ಲೇ ಸುಮಾರು 4 ಕೋಟಿ ಜನರು ಅಪಾಯಕ್ಕೆ ಸಿಲುಕಲಿದ್ದಾರೆ ಎಂದು ವಿಶ್ವಸಂಸ್ಥೆ ಆತಂಕವ್ಯಕ್ತಪಡಿಸಿದೆ. ಇದರ ಜೊತೆಗೆ ಜಗತ್ತಿನ ಕರಾವಳಿ ಭಾಗದ ಹಲವು ದೇಶಗಳಿಗೆ ಗಂಡಾಂತರ ತಪ್ಪಿದ್ದಲ್ಲ ಎಂದು ಹೇಳಿದೆ. ಒಂದುಕಡೆ ಜಾಗತಿಕ ತಾಪಮಾನದ ನೇರಪರಿಣಾಮ, ಜೊತೆಗೆ ಅಡ್ಡಪರಿಣಾಮಗಳ ಬಗ್ಗೆ ವಿಶ್ವಸಂಸ್ಥೆ ವರದಿ ನೀಡಿದೆ. ಕ್ಷಿಪ್ರ ನಗರೀಕರಣ ಹಾಗೂ ಆರ್ಥಿಕ ಪ್ರಗತಿಯಿಂದಾಗಿ ಮುಂಬಯಿ ಹಾಗೂ ಕೋಲ್ಕತಾಗಳು ಭವಿಷ್ಯದಲ್ಲಿ ಕರಾವಳಿ ಪ್ರವಾಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ತುತ್ತಾಗಲಿವೆ. ಜಾಗತಿಕ ಹವಾಮಾನ ಬದಲಾವಣೆಯ ಘೋರ ಪರಿಣಾಮಗಳು ಪೆಸಿಫಿಕ್, ದಕ್ಷಿಣ ಹಾಗೂ ಆಗ್ನೇಯ ಏಷ್ಯಾ ದೇಶಗಳಲ್ಲಿ ಕಂಡುಬರಲಿವೆ ಎನ್ನಲಾಗಿದೆ. ವಿಶ್ವಸಂಸ್ಥೆಯ `ಜಾಗತಿಕ ಪರಿಸರ ಮುನ್ನೋಟ: ಪ್ರಾದೇಶಿಕ ಪರಾಮರ್ಶೆ’ ಹೀಗೊಂದು ರಿಪೋರ್ಟ್ ನೀಡಿದೆ.
ಸಾಮಾನ್ಯವಾಗಿ ವಿಶ್ವಸಂಸ್ಥೆ ಇಂತಹ ವರದಿಗಳನ್ನು ಕರಾವಳಿ ಸಮೀಪದ ಪಟ್ಟಣಗಳನ್ನು ಮಾತ್ರ ಗುರುತಿಸಿ ನೀಡುತ್ತವೆ. ಆದರೆ ಅಪಾಯ ಮೆಟ್ರೋಪಾಲಿಟಿನ್ ನಗರಗಳಾದ ಮುಂಬಯಿ, ಕೋಲ್ಕತಾಕ್ಕೆ ಮಾತ್ರವಲ್ಲ. ಕರ್ನಾಟಕ ಸಹಿತ ದೇಶದ ಕರಾವಳಿಯಲ್ಲಿ ತ್ವರಿತ ನಗರೀಕರಣ ಕಾಣುತ್ತಿರುವ ಪ್ರತಿಯೊಂದು ಪ್ರದೇಶಕ್ಕೂ ಕಟ್ಟಿಟ್ಟ ಬುತ್ತಿ ಎಂದು ಹೇಳಲಾಗುತ್ತದೆ. 2050ರ ವೇಳೆಗೆ ಸಮುದ್ರಮಟ್ಟ ಏರಿಕೆಯಿಂದ ಸಮಸ್ಯೆಗೆ ಸಿಲುಕುವ ವಿಶ್ವದ 10 ನಗರಗಳಲ್ಲಿ ಏಳು ಏಷ್ಯಾ ಪೆಸಿಫಿಕ್ ವಲಯಕ್ಕೆ ಸೇರಿವೆ. ಆ ವೇಳೆ ಹಲವು ಜನರು ಸಂಕಷ್ಟಕ್ಕೆ ಸಿಲುಕಲಿದ್ದು, 4 ಕೋಟಿ ಮಂದಿ ತೊಂದರೆಗೊಳಗಾಗುತ್ತಾರೆ ಎನ್ನಲಾದ ಭಾರತ ಮೊದಲ ಸ್ಥಾನದಲ್ಲಿದೆ. ಹಾಗೆಯೇ ಬಾಂಗ್ಲಾದೇಶದ 2.5 ಕೋಟಿ, ಚೀನಾದ 2 ಕೋಟಿ ಹಾಗೂ ಫಿಲಿಫಿನ್ಸ್ನ 1.5 ಕೋಟಿ ಮಂದಿ ಅಪಾಯಕ್ಕೆ ಒಳಗಾಗಲಿದ್ದಾರೆ ಎಂದು ವರದಿ ಹೇಳಿದೆ. ವಿಶ್ವದ ಹಲವು ಪ್ರಮುಖ ಕರಾವಳಿ ನಗರಗಳು ಈಗಾಗಲೇ ಮಿತಿ ಮೀರಿದ ಜನಸಂಖ್ಯೆ ಮತ್ತು ನಗರೀಕರಣದಿಂದಾಗಿ ಪ್ರವಾಹದಂಥ ಸ್ಥಿತಿ ಎದುರಿಸುತ್ತಿವೆ. ಆದರೆ ಜಾಗದ ಕೊರತೆಯು, ಸಮಸ್ಯೆ ಇತ್ಯರ್ಥದಲ್ಲಿ ಬಹುದೊಡ್ಡ ತೊಡಕಾಗಿದೆ ಎಂದು ವರದಿ ಹೇಳಿದೆ. ಜನವಸತಿ ವ್ಯವಸ್ಥೆಯಲ್ಲಿ ಬದಲಾವಣೆ, ಕ್ಷಿಪ್ರ ನಗರೀಕರಣ, ಸಾಮಾಜಿಕ-ಆರ್ಥಿಕ ಪ್ರಗತಿಯಿಂದಾಗಿ ಕರಾವಳಿ ಪ್ರದೇಶಗಳು ನೈಸರ್ಗಿಕ ವಿಕೋಪಕ್ಕೆ ಹೆಚ್ಚು ತುತ್ತಾಗುವ ಸಾಧ್ಯತೆ. ಸಮುದ್ರ ಮಟ್ಟ ಏರಿಕೆಯಾಗುತ್ತಿರುವುದರಿಂದಲೂ ಭಾರೀ ಅಪಾಯ ಎದುರಾಗುತ್ತದೆ. ವಿಶ್ವಸಂಸ್ಥೆ ವರದಿಯಲ್ಲಿ ಪ್ರಮುಖ ನಗರಗಳನ್ನಷ್ಟೇ ಹೆಸರಿಸಲಾಗಿದೆ. 2050ಕ್ಕೆ ಭಾರತದ 4 ಕೋಟಿ, ಬಾಂಗ್ಲಾದೇಶದ 2.5 ಕೋಟಿ, ಚೀನಾದ 2 ಕೋಟಿ ಹಾಗೂ ಫಿಲಿಪ್ಪೀನ್ಸ್ ನ 1.5 ಕೋಟಿ ಮಂದಿ ಸಮುದ್ರಮಟ್ಟ ಏರಿಕೆಯ ದುಷ್ಪರಿಣಾಮಕ್ಕೆ ಒಳಗಾಗಲಿದ್ದಾರಂತೆ. ಮುಂಬಯಿ, ಕೋಲ್ಕತಾ, ಚೀನದ ಗ್ವಾಂಗ್ಜು, ಶಾಂಘೈ, ಬಾಂಗ್ಲಾ ರಾಜಧಾನಿ ಢಾಕಾ, ಮ್ಯಾನ್ಮಾರ್ ನ ಯಾಂಗೋನ್, ಥಾಯ್ಲೆಂಡ್ ನ ಬ್ಯಾಂಕಾಕ್, ವಿಯೆಟ್ನಾಂನ ಹೈ ಫೋಂಗ್ ಮತ್ತು ಹೋಚಿಮಿನ್ ನಗರಗಳು ಕರಾವಳಿ ಪ್ರವಾಹಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
ಜಗತ್ತು, ದೇಶ, ರಾಜ್ಯಗಳೇ ಬರಗಾಲದಿಂದ ತತ್ತರಿಸುತ್ತಿದೆ. ಮಳೆ ಕಡಿಮೆ ಬೀಳುವ ಪ್ರದೇಶಗಳ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಕುಡಿಯುವ ನೀರಿಗೆ ತತ್ವಾರ ಶುರುವಾಗಿದೆ. ಜನರ ಪರಿಸ್ಥಿತಿ ಅವರೇ ನಂಬುವ ಸಾಕ್ಷಾತ್ ಭಗವಂತನಿಗೆ ಪ್ರೀತಿ. ಅಲ್ಲಲ್ಲಿ ಜನರು ಸಾಯುತ್ತಿದ್ದಾರೆ. ಇವುಗಳ ಜೊತೆ ರಾಜಕಾರಣಿಗಳ ಅಸಮರ್ಥ ಆಡಳಿತ. ಎಲ್ಲವೂ ಮನುಷ್ಯನ ಸ್ವಾರ್ಥದ ಎಫೆಕ್ಟ್. ಭೂಮಿ ಸುಡುತ್ತಲೇ ಇದೆ. ಈ ಬಾರಿ ಏನಾದ್ರೂ ಸರಿಯಾದ ಪ್ರಮಾಣದಲ್ಲಿ ಮಳೆ ಬಂದಿಲ್ಲ ಎಂದಿಟ್ಟುಕೊಳ್ಳಿ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ. ಏನಾಗಬಹುದು ಎಂದು ನೆನೆಸಿಕೊಂಡರೇ ಭಯವಾಗುತ್ತದೆ. ಇಲ್ಲಿಗೆ ನೂರು ವರ್ಷದ ಹಿಂದೆ ಇಡೀ ಭೂಮಿಯನ್ನು ಸ್ಯಾಟ್ ಲೈಟ್ ಮೂಲಕ ನೋಡಿದಾಗ, ಶೇಕಡಾ ಎಂಬತ್ತರಷ್ಟು ಹಸಿರು ಬಣ್ಣವೇ ವ್ಯಾಪಿಸಿತ್ತು. ಇವತ್ತಿಗೆ ಅದೇ ಭೂಮಿಯಲ್ಲಿ ಹಳದಿ ಬಣ್ಣ ಕಣ್ಣಿಗೆ ರಾಚುತ್ತದೆ. ಹಸಿರು ಮಾಯವಾಗಿ ಅಲ್ಲೀಗ ಉಳಿದುಕೊಂಡಿದ್ದು ಬಟಾಬಯಲು. ಓಝೋನ್ ಪದರವನ್ನು ನಾಶಪಡಿಸಿ ನೇರವಾಗಿ ಭೂಮಿಯ ಮೇಲೆ ರೌದ್ರವತಾರ ತೋರಿಸುತ್ತಿದೆ ಸೂರ್ಯ. ಜಾಗತೀಕ ತಾಪಮಾನ ಯಾವಪರಿ ಹೆಚ್ಚಿದೆಯೆಂದರೇ, ಅದೆಷ್ಟೋ ಲಕ್ಷ ಕಿಲೋಮೀಟರ್ ದೂರದಿಂದ ಭೂಮಿಗೆ ಬೀಳುವ ಸೂರ್ಯಕಿರಣದ ತಾಪ ತಾಳದೆ ಸಾಯುತ್ತಿದ್ದಾರೆ ಜನರು.
ಜಗತ್ತು ಬೆಳೆಯುತ್ತಿದ್ದಂತೆ ಮನುಷ್ಯನ ಮೆದುಳು ವಿಕಾಸವಾಗತೊಡಗಿತ್ತು. ಅವನು ಪ್ರಕೃತಿ ಜೊತೆ ಆಟವಾಡಲು ಶುರುಮಾಡಿದ. ಒಂದುಹಂತಕ್ಕೆ ಪ್ರಕೃತಿ ಸ್ಪಂಧಿಸದಿದ್ದಾಗ ಅದರ ಜೊತೆ ಸೆಣಸಾಡತೊಡಗಿದ. ಪ್ರಕೃತಿಯನ್ನು ಸೋಲಿಸಿ ಮುನ್ನುಗ್ಗತೊಡಗಿದ. ಗೆದ್ದುಬೀಗಿದ. ಆ ಕ್ಷಣಕ್ಕೆ ಮನುಷ್ಯನಿಗೆ ಇದು ತಾತ್ಕಾಲಿಕ ಸಂಭ್ರಮ. ಭವಿಷ್ಯದಲ್ಲಿ ಕಾದಿದೆ ಅಪಾಯ ಎಂಬ ಹಕೀಕತ್ತು ಅರ್ಥವಾಗಲೇ ಇಲ್ಲ. ಇವತ್ತು ಅರ್ಥವಾದರೂ ಪ್ರಕೃತಿ ಜೊತೆ ಕಾಂಪ್ರಮೈಸ್ ಮಾಡಿಕೊಳ್ಳುವ ಎಲ್ಲಾ ದಾರಿಗಳನ್ನು ಮುಚ್ಚಿಕೊಂಡಿದ್ದಾನೆ. ಅವತ್ತು ಸ್ವಾರ್ಥ ಮೆರೆದಿದ್ದಕ್ಕೆ ಸೂಕ್ತ ಪಾಠ ಕಲಿಸಲು ಈಗ ಪ್ರಕೃತಿ ಸಿದ್ದವಾಗಿದೆ. ಇವತ್ತಿಗೆ ಪ್ರಕೃತಿಯದ್ದೇ ರೌದ್ರವತಾರ.
- ರಾ ಚಿಂತನ್
POPULAR STORIES :
ಅಜರ್ ಯಾಕೆ ತನ್ನ ಕಾಲರ್ ನ ಮೇಲಕ್ಕೆತ್ತಿ ಆಟವಾಡ್ತಿದ್ರು ಗೊತ್ತಾ..?
ಹುಲಿದೈವ ಸ್ಪರ್ಶಿಸಿದ್ರೆ ಸಾವು ಖಚಿತ….!
400 ವರ್ಷಗಳ ಹಿಂದಿನ ಶವಗಳು ಕೊಳೆತಿಲ್ಲ..! ಈ ಗುಹೆ ಪ್ರವೇಶಿಸುವುದಕ್ಕೆ ಎಂಟೆದೆ ಬೇಕು..!?
ಇದ್ದಕ್ಕಿದ್ದಂತೆ ಗೇಲ್ ಸಿಡಿತಿರೋದು ಯಾಕೆ..!? ಕೊಹ್ಲಿ ಬಳಿ ಗೇಲ್ ಹೇಳಿದ್ದೇನು ಗೊತ್ತಾ..!?
ಐಶ್ವರ್ಯಗೆ ಶಾಕ್ ಕೊಟ್ಟ ಅಭಿಷೇಕ್ ಬಚ್ಚನ್ ನ ನಡುವಳಿಕೆ..! #Video