ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಹಿರಿಯ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರು ಐಸಿಸಿ ಓಡಿಐ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಕ್ರಮವಾಗಿ ಒಂದು ಮತ್ತು ಎರಡನೇ ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ. ಇನ್ನು, ವೇಗಿ ಜಸ್‌ಪ್ರಿತ್ ಬುಮ್ರಾ ಬೌಲಿಂಗ್ ವಿಭಾಗದಲ್ಲಿ ಮೂರನೇ ಸ್ಥಾನದಲ್ಲಿಯೇ ಉಳಿದುಕೊಂಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಕಳೆದ ಎರಡು ಓಡಿಐ ಪಂದ್ಯಗಳಲ್ಲಿ ಕ್ರಮವಾಗಿ 89 ಮತ್ತು 63 ರನ್ ಗಳಿಸಿದ್ದ ವಿರಾಟ್ ಕೊಹ್ಲಿ 870 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿ ಪಾರಮ್ಯ ಮೆರೆದಿದ್ದಾರೆ. ಆದರೆ, ಗಾಯದಿಂದಾಗಿ ಆಸ್ಟ್ರೇಲಿಯಾ ವಿರುದ್ಧ ಓಡಿಐ ಸರಣಿಗೆ ರೋಹಿತ್ ಶರ್ಮಾ(842) ಅಲಭ್ಯರಾದರೂ ಎರಡನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಪಾಕಿಸ್ತಾನ ತಂಡದ ನಾಯಕ ಬಾಬರ್ ಆಝಮ್ (8370 ಮೂರನೇ ಸ್ಥಾನದಲ್ಲಿದ್ದಾರೆ.
ನ್ಯೂಜಿಲೆಂಡ್ ತಂಡದ ಹಿರಿಯ ಬ್ಯಾಟ್ಸ್‌ಮನ್ ರಾಸ್ ಟೇಲರ್ (818) ಹಾಗೂ ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ (791) ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ. ಅಫ್ಘಾನಿಸ್ತಾನ ವಿರುದ್ಧ ಎರಡು ಹಾಗೂ ಮೂರನೇ ಪಂದ್ಯಗಳಲ್ಲಿ ಶತಕ ಸೇರಿದಂತೆ 285 ರನ್ ಕಲೆ ಹಾಕಿದ್ದ ಐರ್ಲೆಂಡ್‌ನ ಪಾಲ್ ಸ್ಟರ್ಲಿಂಗ್ ಎಂಟು ಸ್ಥಾನಗಳಲ್ಲಿ ಏರಿಕೆ ಕಂಡು 29ನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಜಸ್‌ಪ್ರಿತ್ ಬುಮ್ರಾ 700 ಅಂಕಗಳೊಂದಿಗೆ ಮೂರನೇ ಶ್ರೇಯಾಂಕದಲ್ಲಿಯೇ ಮುಂದುವರಿದಿದ್ದಾರೆ. ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್(722) ಹಾಗೂ ಆಫ್ಘನ್ ಸ್ಪಿನ್ನರ್ ಮುಜೀಬ್ ಉರ್ ರಹ್ಮನ್(701) ಅವರು ಕ್ರಮವಾಗಿ ಅಗ್ರ ಎರಡು ಸ್ಥಾನಗಳನ್ನು ಅಲಂಕರಿಸಿದ್ದಾರೆ.
ಇತ್ತೀಚೆಗೆ ಮುಕ್ತಾಯವಾಗಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಅದ್ಭುತ ಬೌಲಿಂಗ್ ಮಾಡಿ ಒಟ್ಟು 7 ವಿಕೆಟ್ ಕಿತ್ತಿದ್ದ ಬಾಂಗ್ಲಾದೇಶ ಸ್ಪಿನ್ನರ್ ಮೆಹಡಿ ಹಸನ್ ಒಂಬತ್ತು ಸ್ಥಾನಗಳಲ್ಲಿ ಏರಿಕೆ ಕಂಡು ನಾಲ್ಕನೇ ಶ್ರೇಯಾಂಕಕ್ಕೇರಿದ್ದಾರೆ. ಎರಡನೇ ಪಂದ್ಯದಲ್ಲಿ 25 ರನ್ ನೀಡಿ ನಾಲ್ಕು ವಿಕೆಟ್ ಪಡೆದಿದ್ದ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು.
ಕಳೆದ ಓಡಿಐ ಸರಣಿಯಲ್ಲಿ 6 ವಿಕೆಟ್ ಪಡೆದಿದ್ದ ಬಾಂಗ್ಲಾದೇಶದ ವೇಗಿ ಮುಷ್ತಾಫಿಝರ್ ರಹ್ಮನ್ 19 ರಿಂದ ಎಂಟನೇ ಸ್ಥಾನಕ್ಕೇರಿದ್ದಾರೆ. ಬಾಂಗ್ಲಾ ಹಿರಿಯ ಆಲ್‌ರೌಂಡರ್ ಶಾಕೀಬ್ ಅಲ್ ಹಸನ್ ಅವರು, 15 ರಿಂದ 13ನೇ ಸ್ಥಾನಕ್ಕೆ ಹಾಗೂ ಮುಷ್ತಾಫಿಕರ್ ರಹೀಮ್ ಬ್ಯಾಟಿಂಗ್‌ನಲ್ಲಿ ಒಂದು ಸ್ಥಾನ ಏರಿಕೆ ಕಂಡು 15ನೇ ಶ್ರೇಯಾಂಕ ಪಡೆದಿದ್ದಾರೆ.