ಮಾಜಿ ಟೀಮ್ ಇಂಡಿಯಾ ನಾಯಕ ಬಿಸಿಸಿಐ ಹಾಲಿ ಅಧ್ಯಕ್ಷ ಸೌರವ್ ಗಂಗೂಲಿ ಹೃದಯದಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎರಡನೇ ಬಾರಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊಲ್ಕತ್ತಾದ ಅಪೊಲೊ ಆಸ್ಪತ್ರೆಗೆ ದಾಖಲಾಗಿರುವ ಸೌರವ್ ಗಂಗೂಲಿಗೆ ಎರಡನೇ ಆ್ಯಂಜಿಯೋಪ್ಲಾಸ್ಟಿಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ.
ಬುಧವಾರ ಸೌರವ್ ಗಂಗೂಲಿಗೆ ಎದೆಯಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೌರವ್ ಗಂಗೂಲಿಯ ಆರೋಗ್ಯದ ಬಗ್ಗೆ ಮಾಹಿತಿ ಪಡೆಯಲು ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದ್ದರು. ಗಂಗೂಲಿಯ ಭೇಟಿಯ ಬಳಿಕ ಮಾತನಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ “ಗಂಗೂಲಿ ಎಚ್ಚರದಿಂದಿದ್ದು ಮಾತನಾಡುತ್ತಿದ್ದಾರೆ” ಎಂದಿದ್ದಾರೆ.
ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ನಾನು ಅವರೊಂದಿಗೆ(ಸೌರವ್ ಗಂಗೂಲಿ) ಹಾಗೂ ಅವರ ಪತ್ನಿ ಡೋನಾ ವರೊಂದಿಗೆ ಮಾತನಾಡಿದ್ದೇನೆ” ಎಂದು ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿದರು. ಇದೇ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಯಶಸ್ವಿ ಶಸ್ತ್ರಚಿಕಿತ್ಸೆಗಾಗಿ ವೈದ್ಯಾಧಿಕಾರಿಗಳನ್ನು ಅಭಿನಂದಿಸಿದ್ದಾರೆ.
ಜನವರಿ ತಿಂಗಳ ಆರಂಭದಲ್ಲಿ ಸೌರವ್ ಗಂಗೂಲಿ ತಮ್ಮ ನಿವಾಸದ ಜಿಮ್‌ನಲ್ಲಿ ವರ್ಕ್‌ಔಟ್ ಮಾಡುತ್ತಿದ್ದ ವೇಳೆ ಲಘು ಹೃದಯಾಘಾತವಾಗಿತ್ತು. ಬಳಿಕ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಆಂಜಿಯೋಪ್ಲಾಸ್ಟಿ ನಡೆಸಲಾಗಿತ್ತು. ಮತ್ತೆರಡು ಎರಡು ರಕ್ತನಾಳಗಳಲ್ಲಿ ದೋಷವಿರುವುದನ್ನು ಗುರುತಿಸಿದ್ದ ವೈದ್ಯಾಧಿಕಾರಿಗಳು ಕೆಲ ದಿನಗಳ ವಿಶ್ರಾಂತಿಯ ನಂತರ ಆ್ಯಂಜಿಯೋಪ್ಲಾಸ್ಟಿ ನಡೆಸುವ ನಿರ್ಧಾರವನ್ನು ಕೈಗೊಂಡಿದ್ದರು. ಇದೀಗ ಸೌರವ್ ಗಂಗೂಲಿಗೆ ಎರಡನೇ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆ ಯಶಸ್ವಿಯಾಗಿ ನೆರವೇರಿದೆ.