ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಪೈನಲ್‌ಗೆ ಅರ್ಹತೆ ಪಡೆದ ಮೊದಲ ತಂಡ ಎಂಬ ಕೀರ್ತಿಗೆ ಮಂಗಳವಾರ ನ್ಯೂಜಿಲೆಂಡ್ ಭಾಜನವಾಯಿತು. ಕೋವಿಡ್-19 ನಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಸ್ಟ್ರೇಲಿಯಾ ತಂಡ ಮುಂದೂಡುತ್ತಿದ್ದಂತೆ ಕಿವೀಸ್ ಪಾಳಯದಲ್ಲಿ ಸಂಭ್ರಮ ಮನೆ ಮಾಡಿತ್ತು.
ಸರಾಸರಿ 69.2 ಹೊಂದಿರುವ ಆಸ್ಟ್ರೇಲಿಯಾ ತಂಡ ಮೂರನೇ ಸ್ಥಾನದಲ್ಲಿದೆ. ಆದರೆ, ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಮುಂದಕ್ಕೆ ಹಾಕಿದ ಪರಿಣಾಮ ಆಸ್ಟ್ರೇಲಿಯಾದ ಟೆಸ್ಟ್ ಚಾಂಪಿಯನ್ಸ್ ಹಾದಿ ಬಹುತೇಕ ಕಠಿಣವಾಗಿದೆ.
ಇದೀಗ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಫೆ. 5 ರಿಂದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗುತ್ತಿವೆ. ಈ ಸರಣಿಯು ಉಭಯ ತಂಡಗಳಿಗೆ ಟೆಸ್ಟ್ ಚಾಂಪಿಯನ್‌ಷಿಪ್‌ನ ಕೊನೆಯ ಸ್ಪರ್ಧೆಯಾಗಿದೆ. ಹಾಗಾಗಿ ಉಭಯ ತಂಡಗಳಿಗೆ ಪ್ರಸ್ತುತ ಸರಣಿ ತುಂಬಾ ಮುಖ್ಯವಾಗಿದೆ.
ಇದು ಭಾರತ ತಂಡಕ್ಕೆ ನೇರವಾದ ಪ್ರಶ್ನೆ. ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ನಾಲ್ಕು ಪಂದ್ಯಗಳಲ್ಲಿ ಒಂದರಲ್ಲಿಯೂ ಸೋಲು ಅನುಭವಿಸದೆ, ಕನಿಷ್ಠ ಎರಡು ಪಂದ್ಯಗಳಲ್ಲಿ ಜಯ ಸಾಧಿಸಬೇಕು. ಭಾರತ 2-1 ಅಂತರದಲ್ಲಿ ಇಂಗ್ಲೆಂಡ್ ವಿರುದ್ಧ ತವರು ಟೆಸ್ಟ್ ಸರಣಿ ಗೆದ್ದರೂ ಫೈನಲ್‌ಗೆ ಲಗ್ಗೆ ಇಡಲಿದೆ. ಒಂದು ವೇಳೆ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದರೆ, ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಿಂದ ಹೊರ ಬೀಳಲಿದೆ. ಆದರೆ, ಮೇಲೆ ಹೇಳಿರುವ ಅಂತರದಲ್ಲಿ ಪಂದ್ಯ ಸೋಲದೆ ಟೆಸ್ಟ್ ಸರಣಿ ಗೆದ್ದರೆ ಭಾರತ, ನ್ಯೂಜಿಲೆಂಡ್ ವಿರುದ್ಧ ಫೈನಲ್‌ನಲ್ಲಿ ಸೆಣಸುವುದು ಬಹುತೇಕ ಖಚಿತ.
ಭಾರತದ ವಿರುದ್ಧ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ ದೊಡ್ಡ ಅಂತರದಲ್ಲಿ ಗೆಲವು ಅಗತ್ಯವಿದೆ. ಜೋ ರೂಟ್ ಪಡೆ ಮೂರು ಪಂದ್ಯಗಳಲ್ಲಿ ಗೆದ್ದು ಒಂದು ಪಂದ್ಯ ಸೋತರೂ ಫೈನಲ್‌ಗೆ ಲಗ್ಗೆ ಇಡಲಿದೆ. ಈ ಅಂಕಿಅಂಶಗಳಲ್ಲಿ ಯಾವುದೇ ವ್ಯತ್ಯಾಸವಾದರೂ ಇಂಗ್ಲೆಂಡ್ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಿಂದ ಹೊರ ಬೀಳಲಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯನ್ನು ಮುಂದೂಡಿರುವ ಕಾರಣ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಹಾದಿ ಆಸ್ಟ್ರೇಲಿಯಾಗೆ ಸಂಪೂರ್ಣ ಬಂದ್ ಆಗಿದೆ. ಒಂದು ವೇಳೆ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಡ್ರಾನಲ್ಲಿ ಅಂತ್ಯ ಕಂಡರೆ ಆಸ್ಟ್ರೇಲಿಯಾಗೆ ಫೈನಲ್‌ಗೆ ಅರ್ಹತೆ ಪಡೆಯಲಿದೆ. ಮತ್ತೊಂದು ಹಾದಿ ಎಂದರೆ, ಭಾರತ ತಂಡ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಬೇಕು ಅಥವಾ ಇಂಗ್ಲೆಂಡ್ ಕನಿಷ್ಠ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಬಾರದು. ಈ ರೀತಿ ನಾಟಕೀಯ ಬೆಳವಣಿಗೆಗಳು ನಡೆದರೆ ಆಸ್ಟ್ರೇಲಿಯಾ ತಂಡ ಫೈನಲ್ ತಲುಪಲಿದೆ.