ನವದೆಹಲಿ: ರೈತ ಚಳುವಳಿಯ ಹೆಸರಿನಲ್ಲಿ ಭಾರತದ ಆಂತರಿಕ ವಿಚಾರದಲ್ಲಿ ತಲೆ ಹಾಕಿದ ವಿದೇಶಿ ಸೆಲೆಬ್ರಿಟಿಗಳ ವಿರುದ್ಧ ದೇಶಿ ಸೆಲೆಬ್ರಿಟಿಗಳು ಸಿಡಿದೆದ್ದಿದ್ದಾರೆ.
ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಅಜಯ್ ದೇವಗನ್, ಸುನೀಲ್ ಶೆಟ್ಟಿ, ನಿರ್ಮಾಪಕ ಕರಣ್ ಜೋಹರ್, ಗಾಯಕ್ ಕೈಲಾಶ್ ಖೇರ್, ಖ್ಯಾತ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ, ಟೀಂ ಇಂಡಿಯಾ ಆಟಗಾರ ಶಿಖರ್ ಧವನ್, ಸುರೇಶ್ ರೈನಾ ವಿದೇಶಿ ಸೆಲೆಬ್ರಿಟಿಗಳ ವಿರುದ್ಧ ಕಿಡಿ ಕಾರಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸಬೇಡಿ ಎನ್ನುತ್ತಾ #IndiaAgainstPropaganda #IndiaTogether ಟ್ರೆಂಡ್ ಮಾಡಿದ್ದಾರೆ.
ಭಾರತದ ಸಾರ್ವಭೌಮತ್ವದಲ್ಲಿ ರಾಜಿಯಾಗುವುದಿಲ್ಲ. ಬಾಹ್ಯ ಶಕ್ತಿಗಳು ಪ್ರೇಕ್ಷಕರಾಗಬಹುದು ಆದರೆ ಭಾಗವಹಿಸುವಂತಿಲ್ಲ. ಭಾರತೀಯರಿಗೆ ಭಾರತ ಏನು ಎನ್ನುವುದು ತಿಳಿದಿದೆ ಮತ್ತು ಏನು ನಿರ್ಧರಿಸಬೇಕು ಎನ್ನುವುದು ಭಾರತಕ್ಕೆ ಗೊತ್ತಿದೆ. ರಾಷ್ಟ್ರಕ್ಕಾಗಿ ನಾವೆಲ್ಲ ಒಂದಾಗೋಣ ಎಂದು ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದ್ದಾರೆ.
ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‍ಬರ್ಗ್ ರೈತ ಹೋರಾಟವನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. ಖ್ಯಾತ ಪಾಪ್ ಗಾಯಕಿ ರಿಹಾನಾ ಟ್ವೀಟ್ ಮಾಡಿ, ರೈತ ಹೋರಾಟ ಬೆಂಬಲಿಸಿ ಏಕೆ ಮಾತಾಡ್ತಿಲ್ಲ ಅಂತಾ ಪ್ರಶ್ನಿಸಿದ್ದಾರೆ. ಇದಕ್ಕೆ ಬಾಲಿವುಡ್ ನಟಿ ಕಂಗನಾ ರಣಾವತ್ ತಿರುಗೇಟು ನೀಡಿದ್ದಾರೆ.
ಪ್ರತಿಭಟನೆ ನಡೆಸ್ತಿರುವವರು ರೈತರಲ್ಲ. ಅವ್ರು ದೇಶವನ್ನು ವಿಭಜಿಸಲು ನೋಡ್ತಿರುವ ಭಯೋತ್ಪಾದಕರು. ದೇಶವನ್ನು ತುಕ್ಡೆ ತುಕ್ಡೆ ಮಾಡಿ ಚೈನಾ ಕಾಲನಿಗಳನ್ನಾಗಿ ಮಾಡುವ ಉದ್ದೇಶ ಹೊಂದಿರುವವರು. ನಾವು ನಮ್ಮ ದೇಶವನ್ನು ಮಾರಿಕೊಳ್ಳಲು ನೋಡ್ತಿಲ್ಲ. ಅದಕ್ಕೆ ನಾವು ಮಾತಾಡ್ತಿಲ್ಲ. ನೀವು ಸುಮ್ಮನಿರಿ ಎಂದು ಟ್ವೀಟ್ ಮಾಡಿ ಆಕ್ರೊಶ ಹೊರಹಾಕಿದ್ದಾರೆ.
ವಿದೇಶಿ ಪ್ರಮುಖರ ಹೇಳಿಕೆ ಖಂಡಿಸಿ ವಿದೇಶಾಂಗ ಸಚಿವಾಲಯ ಕೂಡ ಪ್ರಕಟಣೆ ಹೊರಡಿಸಿದೆ. ಸೆಲೆಬ್ರಿಟಿಗಳ ಹೇಳಿಕೆಗಳು ಅವಾಸ್ತವ, ಬೇಜವಬ್ದಾರಿತನದಿಂದ ಕೂಡಿವೆ. ಕೆಲ ಸ್ವಾರ್ಥಿಗಳು ಹೋರಾಟದ ಹೆಸರಲ್ಲಿ ಭಾರತದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ಗಿಟ್ಟಿಸಿಕೊಳ್ಳಲು ನೋಡ್ತಿದ್ದಾರೆ. ಇವರ ಸುಳ್ಳುಗಳಿಂದ ವಿದೇಶಗಳಲ್ಲಿ ಗಾಂಧಿ ಪ್ರತಿಮೆಯನ್ನು ಅಪವಿತ್ರ ಮಾಡುವ ಕೆಲಸ ನಡೆದಿದೆ. ಇದು ಭಾರತಕ್ಕೆ ಅತೀವ ನೋವು ತಂದಿದೆ ಎಂದಿದೆ. ಅಲ್ಲದೇ, ಇದಕ್ಕೆ #IndiaAgainstPropaganda #IndiaTogether ಹೆಸರಿನ ಹ್ಯಾಷ್‍ಟ್ಯಾಗನ್ನು ವಿದೇಶಾಂಗ ಸಚಿವಾಲಯ ಜೋಡಿಸಿದೆ.