ನಟಿ, ಕಾಂಗ್ರೆಸ್ ಪಕ್ಷ ಸದಸ್ಯೆ ರಮ್ಯಾ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ್ದಾರೆ. ಭಾರತದ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಹೋರಾಟಗಾರ್ತಿ ಗ್ರೆಟಾ ಥೆನ್‌ಬರ್ಗ್ ಬಗ್ಗೆ ಟ್ವೀಟ್ ಮಾಡಿದ್ದಾರೆ ರಮ್ಯಾ.
ಗ್ರೆಟಾ ಮಾಡಿದ್ದ ಟ್ವೀಟ್ ಅನ್ನು ಹಂಚಿಕೊಂಡಿರುವ ನಟಿ ರಮ್ಯಾ, ‘ಬಾಲಿವುಡ್‌ಗಿಂತಲೂ ಹೆಚ್ಚು ಬೆನ್ನುಮೂಳೆ ಇದೆ’ ಎಂದಿದ್ದಾರೆ ರಮ್ಯಾ. ಆ ಮೂಲಕ ಬಾಲಿವುಡ್‌ನ ಹಲವರಿಗೆ ಆತ್ಮಗೌರವ ಇಲ್ಲ, ಪುಕ್ಕಲರು ಎಂದು ಪರೋಕ್ಷವಾಗಿ ಹೇಳಿದ್ದಾರೆ ನಟಿ ರಮ್ಯಾ.
ಅದಾದ ಬಳಿಕ ನಟ ಅಕ್ಷಯ್ ಕುಮಾರ್ ಗೆ ಪ್ರಶ್ನೆ ಮಾಡಿರುವ ರಮ್ಯಾ, ‘ಕೆನೆಡಿಯನ್ ಪ್ರಜೆ ಅಕ್ಷಯ್ ಕುಮಾರ್, ಭಾರತದ ವಿಷಯದ ಬಗ್ಗೆ ಮಾತನಾಡಬಹುದಾದರೆ, ರಿಹಾನ್ನ ಏಕೆ ಮಾತನಾಡಬಾರದು’ ಎಂದು ಪ್ರಶ್ನೆ ಮಾಡಿದ್ದಾರೆ.
ದೆಹಲಿ ರೈತ ಪ್ರತಿಭಟನೆಗೆ ಸಾಮಾಜಿಕ ಹೋರಾಟಗಾರ್ತಿ ಗ್ರೆಟಾ ಥೆನ್‌ಬರ್ಗ್ ಬೆಂಬಲ ಸೂಚಿಸಿದ್ದರು. ಇದೇ ಕಾರಣಕ್ಕೆ ದೆಹಲಿಯಲ್ಲಿ ಗ್ರೆಟಾ ವಿರುದ್ಧ ದೂರು ದಾಖಲಾಗಿತ್ತು. ಅದರ ನಂತರ ಮತ್ತೆ ಟ್ವೀಟ್ ಮಾಡಿದ್ದ ಗ್ರೆಟಾ, ‘ಈಗಲೂ ನಾನು ರೈತರ ಪ್ರತಿಭಟನೆ ಪರ ಇದ್ದೇನೆ ಮತ್ತು ಶಾಂತಿಯುತ ಪ್ರತಿಭಟನೆಯನ್ನು ಬೆಂಬಲಿಸುತ್ತೇನೆ. ನೀವು ಎಷ್ಟೇ ದ್ವೇಷಿಸಿದರೂ, ಮಾನವ ಹಕ್ಕು ಉಲ್ಲಂಘನೆ ಮಾಡಿದರೂ ನನ್ನ ನಿರ್ಧಾರ ಬದಲಾಗುವುದಿಲ್ಲ’ ಎಂದಿದ್ದಾರೆ ಗ್ರೆಟಾ.
ಗ್ರೆಟಾ ಥೆನ್‌ಬರ್ಗ್ ಹಾಗೂ ಪಾಪ್ ಗಾಯಕಿ ರಿಹಾನ್ನ ಅವರುಗಳು ದೆಹಲಿ ರೈತ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಬೆನ್ನಲ್ಲೇ, ಬಾಲಿವುಡ್‌ನ ಹಲವು ನಟರು, ಕ್ರಿಕೆಟ್ ಸ್ಟಾರ್‌ಗಳು ‘ಹೊರಗಿನವರು ಭಾರತದ ವಿಷಯದಲ್ಲಿ ಮೂಗು ತೂರಿಸಬಾರದು’ ಎಂಬರ್ಥ ಬರುವ ಸರಣಿ ಟ್ವೀಟ್‌ಗಳನ್ನು ಮಾಡಿದ್ದರು. ಇದು ಭಾರಿ ಟ್ರೋಲ್‌ಗೆ ಗುರಿಯಾಗಿತ್ತು. ಇದೇ ಕಾರಣಕ್ಕೆ ನಟಿ ರಮ್ಯಾ, ‘ಬಾಲಿವುಡ್ ಪುಕ್ಕಲು’ ಎಂದು ಹೇಳಿರುವುದು.
ಈ ಹಿಂದೆ ನಟಿ ರಮ್ಯಾ ಡಿಸೆಂಬರ್ 23 ರಂದು ರೈತರ ಪ್ರತಿಭಟನೆ ಬೆಂಬಲಿಸಿ ಒಂದು ಹೊತ್ತಿನ ಊಟ ತ್ಯಜಿಸಿದ್ದರು. ರೈತರ ಹೋರಾಟದ ವಿಷಯವಾಗಿ ನಟಿ ಕಂಗನಾ ರಣೌತ್‌ಗೂ ಟ್ವಿಟ್ಟರ್‌ನಲ್ಲಿ ಪ್ರಶ್ನೆಗಳನ್ನು ಕೇಳಿದ್ದರು ರಮ್ಯಾ. ಅದಕ್ಕೂ ಮುನ್ನಾ ಹತ್ರಾಸ್ ಅತ್ಯಾಚಾರ ಪ್ರಶ್ನಿಸಿ ನಟ ಅಕ್ಷಯ್ ಕುಮಾರ್ ಅವರನ್ನು ಪ್ರಶ್ನೆ ಮಾಡಿದ್ದರು.
ನಟಿ ರಮ್ಯಾ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸಿದ್ದರು. ಈ ಹಿಂದೆ ಕಾಂಗ್ರೆಸ್‌ನಿಂದ ಸಂಸದೆಯಾಗಿಯೂ ಆಯ್ಕೆ ಆಗಿದ್ದರು. ಆದರೆ ಕಳೆದ ಲೋಕಸಭೆ ಚುನಾವಣೆ ನಂತರ ರಾಜಕೀಯದಿಂದ ಅಂತರ ಕಾಯ್ದುಕೊಂಡಿದ್ದಾರೆ ರಮ್ಯಾ.