ಕನ್ನಡದ ಖ್ಯಾತ ನಟ ಶಿವರಾಜ್ ಕುಮಾರ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಪತ್ರವೊಂದು ಬಂದಿದೆ. ಈ ವಿಷಯವನ್ನು ಸಾಹಿತಿ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಕಾರ್ಯಕ್ರಮವೊಂದರಲ್ಲಿ ಬಹಿರಂಗಗೊಳಿಸಿದ್ದಾರೆ.
ಮಾಜಿ ಸಚಿವ ಎಚ್.ಎಂ. ರೇವಣ್ಣ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಸಾಹಿತಿ ಲಲಿತಾ ನಾಯಕ್ ಶಿವರಾಜ್ ಕುಮಾರ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಪತ್ರ ಬಂದಿರುವುದಾಗಿ ಹೇಳಿದ್ದಾರೆ.
”ಮೇ. 1 ರಂದು ನನ್ನನ್ನು ಕೊಲೆ ಮಾಡುತ್ತಾರಂತೆ. ಈ ಕುರಿತ ಪತ್ರ ನನಗೆ ಬಂದಿದೆ. ಬಿಜೆಪಿ ಶಾಸಕ ಸಿ.ಟಿ. ರವಿ, ಸಂಪಾದಕ ರಂಗನಾಥ್(ಪಬ್ಲಿಕ್ ಟಿವಿ), ನಟ ಶಿವರಾಜ್ ಕುಮಾರ್ ಅವರನ್ನು ಕೊಲೆ ಮಾಡುತ್ತಾರಂತೆ. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದೇನೆ, ಪೊಲೀಸರು ಈ ಬಗ್ಗೆ ಪರಿಶೀಲನೆ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ ಲಲಿತಾ ನಾಯಕ್.
ನಟ ಶಿವರಾಜ್ ಕುಮಾರ್ ಹಾಗೂ ರಾಜ್ಯದ ಇನ್ನಿತರೆ ಗಣ್ಯರನ್ನು ಕೊಲೆ ಮಾಡುವ ಯೋಚನೆ ಹೊಂದಿರುವುದರ ಉದ್ದೇಶ ಏನು? ಪತ್ರ ಬರೆದವರು ಯಾರು? ಎಂಬುದು ಸ್ಪಷ್ಟವಾಗಿಲ್ಲ.
ಮುಂದುವರೆದು ಕಾರ್ಯಕ್ರಮದಲ್ಲಿ ಮಾತನಾಡಿದ ಬಿಟಿ.ಲಲಿತಾ ನಾಯಕ್, ‘ಈ ಬೆದರಿಕೆಗಳಿಗೆ ನಾನು ಹೆದರುವಳು ಅಲ್ಲ. ಸಿ.ಟಿ. ರವಿಯನ್ನು ಕೊಲೆ ಮಾಡಿದರೆ ನಾನು ಉಳಿಯುತ್ತೇನೆ. ನನ್ನ ಕೊಲೆ ಮಾಡಿದರೆ ಸಿಟಿ ರವಿ ಉಳಿಯುತ್ತಾರೆ. ಇಂತಹ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ಕೊಲೆ ಮಾಡುವರು ಎಲ್ಲಿದ್ದರೂ ಕೊಲೆ ಮಾಡುತ್ತಾರೆ. ಹಾಗಾಗಿ ನಾನು ಹೆದರಿಕೆಯಿಲ್ಲದೇ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದೇನೆ” ಎಂದು ಲಲಿತಾ ನಾಯಕ್ ತಿಳಿಸಿದ್ದಾರೆ.
ಬಿ.ಟಿ.ಲಲಿತಾ ನಾಯಕ್ ಅವರಿಗೆ ಬಂದಿರುವ ಪತ್ರದಲ್ಲಿ ಮಾತ್ರವೇ ಶಿವರಾಜ್ ಕುಮಾರ್ ಹಾಗೂ ಇನ್ನಿತರ ಗಣ್ಯರನ್ನು ಕೊಲ್ಲುವ ಬೆದರಿಕೆ ಹಾಕಲಾಗಿದೆಯೇ ಅಥವಾ ಬಿಟಿ ಲಲಿತಾ ನಾಯಕ್ ಅಂತೆಯೇ ಇತರೆ ಗಣ್ಯರಿಗೂ ಈ ರೀತಿಯ ಪತ್ರಗಳು ಬಂದಿದೆಯೇ ತಿಳಿಯಬೇಕಿದೆ.