ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಚೊಚ್ಚಲ ಬಾರಿಗೆ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಪಡೆದ ಪ್ರಸಿಧ್ ಕೃಷ್ಣ ನಾಲ್ಕು ವಿಕೆಟ್ ಪಡೆದು ಸ್ಮರಣೀಯ ಪದಾರ್ಪಣೆ ಮಾಡುವ ಜೊತೆಗೆ ಏಕದಿನ ಕ್ರಿಕೆಟ್‌ನಲ್ಲಿ ದಾಖಲೆಯನ್ನೂ ಬರೆದರು. ಕನ್ನಡಿಗ ಯುವ ವೇಗಿಯ ಈ ಪ್ರದರ್ಶನ ನನಗೆ ಆಶ್ಚರ್ಯವನ್ನುಂಟು ಮಾಡಲಿಲ್ಲ ಎಂದು ಕೆಎಲ್ ರಾಹುಲ್ ಹೇಳಿದ್ದಾರೆ.
“ನಾನು ಪ್ರಾಮಾಣಿಕವಾಗಿ ಹೇಳಬೇಕಾದರೆ ಪ್ರಸಿಧ್ ಕೃಷ್ಣ ನೀಡಿದ ಪ್ರದರ್ಶನದಿಂದಾಗಿ ನಾನು ಆಶ್ಚರ್ಯಗೊಳ್ಳಲಿಲ್ಲ. ಮುಂದೆ ಭಾರತವನ್ನು ಪ್ರತಿನಿಧಿಸುವ ಕರ್ನಾಟಕದ ಆಟಗಾರ ಆತನೇ ಎಂದು ನನಗೆ ಮೊದಲೇ ಭರವಸೆಯಿತ್ತು, ಆತನೇ ಆಗಿದ್ದಾನೆ” ಎಂದು ಕೆಎಲ್ ರಾಹುಲ್ ಕನ್ನಡಿಗ ವೇಗಿಯ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ.
“ನಾವು ಒಂದೇ ಬ್ಯಾಚ್‌ನ ಆಟಗಾರರು ಅಲ್ಲ. ಆದರೆ ಆತನ ಆಟವನ್ನು ನಾನು ಜ್ಯೂನಿಯರ್ ಕ್ರಿಕೆಟ್ ಹಾಗೂ ನೆಟ್‌ನಲ್ಲಿ ಸಾಕಷ್ಟು ಬಾರಿ ನೋಡಿದ್ದೇನೆ. ಆತ ನಿಮ್ಮ ಕಣ್ಣು ಸೆಳೆಯುವಂತಾ ವಿಶೇಷ ಪ್ರತಿಭೆ ಹೊಂದಿರುವ ಆಟಗಾರ” ಎಂದು ಎರಡನೇ ಪಂದ್ಯಕ್ಕೆ ಮುನ್ನ ವರ್ಚುವಲ್ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಹೇಳಿದರು.
ಇನ್ನು ಇದೇ ಸಂದರ್ಭದಲ್ಲಿ ಪ್ರಸಿಧ್ ಕೃಷ್ಣ ಅವರ ಸಾಮರ್ಥ್ಯದ ಬಗ್ಗೆ ಕೆಎಲ್ ರಾಹುಲ್ ಮಾತನಾಡಿದರು. “ಆತ ಓರ್ವ ಎತ್ತರದ ಆಟಗಾರನಾಗಿದ್ದು ವೇಗವಾಗಿ ಬೌಲಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಸಾಕಷ್ಟು ಬೌನ್ಸ್‌ಗಳನ್ನು ಎಸೆಯಬಲ್ಲವರಾಗಿದ್ದಾರೆ. ಕಳೆದ ಕೆಲ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಆಡಿದ ನಂತರ ಆತನೋರ್ವ ಧೈರ್ಯವಂತ ಆಟಗಾರ ಎಂದು ನಾನು ಕಂಡುಕೊಂಡೆ” ಎಂದು ಕೆಎಲ್ ರಾಹುಲ್ ಪ್ರಸಿಧ್ ಕೃಎಷ್ಣ ಬಗ್ಗೆ ವಿವರಿಸಿದರು.
“ಆತ ಆಟದ ಬಗ್ಗೆ ಸಾಕಷ್ಟು ಸೂಕ್ಷ್ಮತೆಗಳನ್ನು ಅರಿತುಕೊಂಡಿದ್ದಾರೆ. ಅದು ಕೇವಲ ಕೌಶಲ್ಯದ ವಿಚಾರವಾಗಿ ಮಾತ್ರವಲ್ಲ. ಅಟವನ್ನು ಅರ್ಥ ಮಾಡಿಕೊಳ್ಳುವುದು ಹಾಗೂ ಅರಿತುಕೊಳ್ಳುವ ವಿಚಾರದಲ್ಲಿಯೂ ಪ್ರಸಿಧ್ ಅತ್ಯುತ್ತಮ ಆಟಗಾರ. ತುಂಬಾ ವೇಗವಾಗಿ ಕಲಿಯುವ ಸಾಮರ್ಥ್ಯ ಆತನಲ್ಲಿದೆ. ಈಗಾಗಲೇ ಹೇಳಿದಂತೆ ತುಂಬಾ ಧೈರ್ಯಶಾಲಿ ಮತ್ತು ಸಾಕಷ್ಟು ಆಕ್ರಮಣಶೀಲತೆಯೊಂದಿಗೆ ಆಡುತ್ತಾರೆ” ಎಂದಿದ್ದಾರೆ ಕೆಎಲ್ ರಾಹುಲ್.