ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲೂ ಮುಂಬೈ ಇಂಡಿಯನ್ಸ್ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡ ಎಂದು ಇಂಗ್ಲೆಂಡ್‌ನ ಮಾಜಿ ನಾಯಕ ಮೈಕಲ್ ವಾನ್ ಹೇಳಿದ್ದಾರೆ.
ರೋಹಿತ್ ಶರ್ಮಾ ಸಾರಥ್ಯದ ಮುಂಬೈ ತಂಡ ಐಪಿಎಲ್ 2021 ಟೂರ್ನಿಯಲ್ಲೂ ಪ್ರಶಸ್ತಿ ಗೆದ್ದರೆ, ಜಗತ್ತಿನ ಐಶಾರಾಮಿ ಟಿ20 ಟೂರ್ನಿಯಾದ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಮೊತ್ತ ಮೊದಲ ತಂಡ ಎನಿಸಿಕೊಳ್ಳಲಿದೆ. ಅಲ್ಲದೆ ತನ್ನ 6ನೇ ಪ್ರಶಸ್ತಿ ಮುಡಿಗೇರಿಸಿಕೊಂಡಂತ್ತಾಗುತ್ತದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ 2010 ಮತ್ತು 2011ರಲ್ಲಿ ಸತತ ಟ್ರೋಫಿ ಗೆದ್ದು, 2012ರ ಫೈನಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸೋತು ಹ್ಯಾಟ್ರಿಕ್ ಸಾಧನೆ ಮಾಡಲು ವಿಫಲವಾಗಿತ್ತು. 2013ರ ಆವೃತ್ತಿಯಲ್ಲೂ ಫೈನಲ್ ತಲುಪಿ ಮುಂಬೈ ಇಂಡಿಯನ್ಸ್ ಎದುರು ನಿರಾಸೆ ಅನುಭವಿಸಿತ್ತು.
ಐಪಿಎಲ್ 2021 ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಉದ್ಘಾಟನಾ ಪಂದ್ಯದಲ್ಲಿ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದ್ದು, ಕೇವಲ ಮೈಕಲ್ ವಾನ್ ಮಾತ್ರವಲ್ಲ ಹಲವು ಮಾಜಿ ಕ್ರಿಕೆಟಿಗರು ಮುಂಬೈ ತಂಡವೇ ಗೆಲ್ಲೋ ಕುದುರೆ ಎಂದಿದ್ದಾರೆ.
ಮುಂಬೈ ತಂಡದಲ್ಲಿ ರಾಹುಲ್ ಚಹರ್ ಮತ್ತು ಕೃಣಾಲ್ ಪಾಂಡ್ಯ ಅವರಂತಹ ಯುವ ಸ್ಪಿನ್ನರ್‌ಗಳು ಇದ್ದರೂ ಕೂಡ, ಅನುಭವಿ ಸ್ಪಿನ್ನರ್ ಇಲ್ಲದೇ ಇರುವುದು ಮಾತ್ರ ಕೊರತೆಯಾಗಿ ಕಾಡುತ್ತಿತ್ತು. ಆದರೆ, ಈ ಬಾರಿ ಆಟಗಾರರ ಹರಾಜಿನಲ್ಲಿ ಲೆಗ್ ಸ್ಪಿನ್ನರ್ ಪಿಯೂಶ್ ಚಾವ್ಲಾ ಅವರನ್ನು ಖರೀದಿಸುವ ಮೂಲಕ ಮುಂಬೈ ತಂಡ ತನ್ನೆಲ್ಲ ದೌರ್ಬಲ್ಯಗಳನ್ನು ಸರಿಪಡಿಸಿಕೊಂಡಿದೆ.