ರಾಯಲ್ ಚಾಲೆಂಜರ್ಸ್ ಬೆಂಗಳೂರು ಬರೀ ಒಂದು ಐಪಿಎಲ್ ತಂಡವಲ್ಲ, ಅಭಿಮಾನಿಗಳ ಪಾಲಿಗೆ ಇದೊಂದು ಎಮೋಷನ್. ಐಪಿಎಲ್ ಇತಿಹಾಸದಲ್ಲಿ ಯಾವ ತಂಡಕ್ಕೂ ಇರದ ದೊಡ್ಡ ಅಭಿಮಾನಿ ಬಳಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇದೆ. 13 ಐಪಿಎಲ್ ಆವೃತ್ತಿಗಳು ಕಳೆದಿದ್ದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಂದೇ ಒಂದು ಟ್ರೋಫಿಯನ್ನು ಕೂಡ ಗೆದ್ದಿಲ್ಲ, ಹಾಗಂತ ಅಭಿಮಾನಿ ಬಳಗದಲ್ಲಿ ಕಿಂಚಿತ್ತೂ ವ್ಯತ್ಯಾಸವಾಗಿಯೇ ಇಲ್ಲ. ಇತರೆ ತಂಡಗಳು ಸತತ 2-3 ಪಂದ್ಯಗಳನ್ನು ಸೋತರೆ ಸಾಕು ಸಾಮಾಜಿಕ ಜಾಲತಾಣದಲ್ಲಿ ಆ ತಂಡಗಳ ಅಭಿಮಾನಿಗಳು ಆಟಗಾರರ ವಿರುದ್ಧ ವೈಯಕ್ತಿಕವಾಗಿ ಕಾಲೆಳೆಯಲು ಶುರು ಮಾಡಿಬಿಡುತ್ತಾರೆ.
ಇತರೆ ತಂಡಗಳ ಇಂತಹ ಕೆಲ ಅಭಿಮಾನಿಗಳ ನಡುವೆ ಎಷ್ಟೇ ಸೀಸನ್ ಸೋತರೂ ಈ ಸಲ ಕಪ್ ನಮ್ದೆ ಎನ್ನುತ್ತಾ ಪ್ರತಿಬಾರಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬೆಂಬಲಿಸುವ ಲಾಯಲ್ ಅಭಿಮಾನಿಗಳನ್ನು ಪಡೆದಿರುವ ಆರ್‌ಸಿಬಿ ನಿಜಕ್ಕೂ ತುಂಬಾ ಅದೃಷ್ಟ ಮಾಡಿರುವ ತಂಡ. ಆದರೆ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆರ್‌ಸಿಬಿ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಹೌದು ಆರ್‌ಸಿಬಿಯು ತನ್ನ ಸಾಮಾಜಿಕ ಜಾಲತಾಣ ಪುಟಗಳಲ್ಲಿ ಆರ್‌ಸಿಬಿ ಹೆಸರಿನ ವಸ್ತ್ರಗಳ ಜೊತೆಗೆ ಆರ್‌ಸಿಬಿ ಹೆಸರಿನಲ್ಲಿ ಚಪ್ಪಲಿಯನ್ನು ಸಹ ಮಾರಾಟ ಮಾಡಲು ಮುಂದಾಗಿದ್ದು, ಆರ್‌ಸಿಬಿ ಮ್ಯಾನೇಜ್‌ಮೆಂಟ್ ವಿರುದ್ಧ ಆರ್‌ಸಿಬಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ