2020ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸತತವಾಗಿ ಕಳಪೆ ಪ್ರದರ್ಶನ ನೀಡುವುದರ ಮೂಲಕ ತೀವ್ರ ಟೀಕೆಗೆ ಒಳಗಾಗಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಈ ಬಾರಿಯ ಐಪಿಎಲ್ ಟೂರ್ನಿಯ ಮೂಲಕ ಯಶಸ್ಸಿನ ಹಾದಿಗೆ ಮರಳಿದ್ದಾರೆ. ಪ್ರಸ್ತುತ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ 2016ರ ನಂತರ ಐಪಿಎಲ್ ಅರ್ಧಶತಕವನ್ನು ಮ್ಯಾಕ್ಸ್‌ವೆಲ್ ಬಾರಿಸಿದರು.
ಅಷ್ಟೇ ಅಲ್ಲದೆ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ 49 ಎಸೆತಗಳಿಗೆ 78 ರನ್ ಬಾರಿಸಿದ್ದ ಮ್ಯಾಕ್ಸ್‌ವೆಲ್ ಈ ಪಂದ್ಯದ ಮೂಲಕ ಸಂಪೂರ್ಣವಾಗಿ ಯಶಸ್ಸಿನ ಹಾದಿಗೆ ಮರಳಿದ್ದರು. ಹೀಗೆ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಮಿಂಚುತ್ತಿರುವ ಗ್ಲೆನ್ ಮ್ಯಾಕ್ಸ್‌ವೆಲ್ ನೂತನ ಮೈಲಿಗಲ್ಲೊಂದನ್ನು ಮುಟ್ಟಿದ್ದಾರೆ.
ಹೌದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 20 ಎಸೆತಗಳಿಗೆ ಮ್ಯಾಕ್ಸ್‌ವೆಲ್ 25 ರನ್ ಗಳಿಸಿದರು. ಇದರಲ್ಲಿ 2 ಸಿಕ್ಸರ್ ಸಹ ಒಳಗೊಂಡಿದ್ದು, ಈ ಮೂಲಕ ಮ್ಯಾಕ್ಸ್‌ವೆಲ್ ಐಪಿಎಲ್ ಇತಿಹಾಸದಲ್ಲಿ 100 ಸಿಕ್ಸರ್ ಸಿಡಿಸಿದ ಆಟಗಾರ ಎಂಬ ಮೈಲಿಗಲ್ಲನ್ನು ಮುಟ್ಟಿದ್ದಾರೆ. ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ 5 ಇನ್ನಿಂಗ್ಸ್‌ಗಳನ್ನಾಡಿದ್ದು 225 ರನ್‌ಗಳನ್ನು ಸಿಡಿಸಿದ್ದಾರೆ ಹಾಗೂ 2 ಅರ್ಧಶತಕಗಳನ್ನು ಬಾರಿಸಿದ್ದಾರೆ.
2020ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 11 ಇನ್ನಿಂಗ್ಸ್‌ನಲ್ಲಿ ಬ್ಯಾಟ್ ಮಾಡಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಕೇವಲ 108 ರನ್ ಗಳಿಸಿದ್ದರು. ಆ ಆವೃತ್ತಿಯಲ್ಲಿ ಮ್ಯಾಕ್ಸ್‌ವೆಲ್ ಯಾವುದೇ ಸಿಕ್ಸರ್ ಬಾರಿಸಿರಲಿಲ್ಲ. ಕಳೆದ ಆವೃತ್ತಿಗೆ ಹೋಲಿಕೆ ಮಾಡಿದರೆ ಈ ಆವೃತ್ತಿಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದು ಟೂರ್ನಿ ಮುಗಿಯುವಷ್ಟರಲ್ಲಿ ಎಷ್ಟು ರನ್ ಗಳಿಸುತ್ತಾರೋ ಕಾದು ನೋಡಬೇಕು.