ಕನ್ನಡ ಚಲನಚಿತ್ರರಂಗದ ಕೋಟಿ ನಿರ್ಮಾಪಕ ಎಂದೇ ಹೆಸರು ಮಾಡಿದ್ದ ಕೆ.ರಾಮು ಅವರು ಸೋಮವಾರ ಕೊರೋನಾವೈರಸ್ ಸೋಂಕಿನಿಂದ ಮೃತಪಟ್ಟರು. ತಮ್ಮ ಕಾಲೇಜು ದಿನಗಳಿಂದಲೇ ಸಿನಿಮಾ ರಂಗದ ಬಗ್ಗೆ ಆಸಕ್ತಿ ಹೊಂದಿದ್ದ ರಾಮು ಹೇಗಾದರೂ ಮಾಡಿ ಸಿನಿಮಾ ರಂಗದಲ್ಲಿ ಕೆಲಸ ಮಾಡಬೇಕು ಇದು ನಿಶ್ಚಯಿಸಿದ್ದರಂತೆ. ಹೀಗೆ ಕಾಲೇಜು ದಿನಗಳು ಮುಗಿಯುತ್ತಾ ಇದ್ದಂತೆ ಬೆಂಗಳೂರಿನಲ್ಲಿ ಚಿಲ್ಲರೆ ಅಂಗಡಿ ಮೂಲಕ ತಮ್ಮ ವ್ಯವಹಾರವನ್ನು ರಾಮು ಶುರುಮಾಡಿದ್ದರು
ಚಿಲ್ಲರೆ ಅಂಗಡಿಯಲ್ಲಿ ಸತತವಾಗಿ ದುಡಿದು ಯಶಸ್ಸುಗಳಿಸಿ ಅದರಿಂದ ಬಂದ ಹಣವನ್ನು ಕರ್ನಾಟಕದಲ್ಲಿ ತೆಲುಗು ಚಿತ್ರಗಳನ್ನು ವಿತರಿಸಲು ಬಳಸಿದರು. ಹೌದು ಮೊದಲಿಗೆ ತೆಲುಗು ಚಿತ್ರಗಳನ್ನು ಕರ್ನಾಟಕದಲ್ಲಿ ವಿತರಣೆ ಮಾಡುವ ಕೆಲಸಕ್ಕೆ ರಾಮು ಕೈ ಹಾಕುವುದರ ಮೂಲಕ ಸಿನಿಮಾರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಹೀಗೆ ತೆಲುಗು ಚಿತ್ರಗಳನ್ನು ವಿತರಣೆ ಮಾಡಿ ಬಂದ ಹಣದಿಂದ 1993ರಲ್ಲಿ ಗೋಲಿಬಾರ್ ಎಂಬ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ರಾಮು ನಿರ್ಮಾಣ ಮಾಡಿದ ಮೊದಲ ಸಿನಿಮಾವೇ ಬ್ಲಾಕ್ ಬಸ್ಟರ್ ಹಿಟ್ ಆಯಿತು. ಈ ಸಿನಿಮಾ ರಾಮು ಅವರಿಗೆ ಹೆಸರಿನ ಜೊತೆ ಒಳ್ಳೆಯ ಹಣವನ್ನು ಸಹ ತಂದುಕೊಟ್ಟಿತು.
ಇದಾದ ಬಳಿಕ ಹಿಂದಿರುಗಿ ನೋಡಿದ್ದೇ ಇಲ್ಲ. ಲಾಕಪ್ ಡೆತ್, ಎಕೆ 47, ಸಿಂಹದಮರಿ , ರಾಕ್ಷಸ, ಕಲಾಸಿಪಾಳ್ಯ, ದುರ್ಗಿ ಸೇರಿದಂತೆ ಹಲವಾರು ಬ್ಲಾಕ್ ಬಸ್ಟರ್ ಚಿತ್ರಗಳನ್ನು ನಿರ್ಮಿಸಿದರು. ಚಿಲ್ಲರೆ ಅಂಗಡಿಯ ವ್ಯಾಪಾರಸ್ಥನಾಗಿದ್ದ ರಾಮು ಕೋಟಿ ನಿರ್ಮಾಪಕನಾಗಿದ್ದು ಸಿನಿಮಾ ರಂಗದ ಹಲವಾರು ಮಂದಿಗೆ ಸ್ಫೂರ್ತಿಯಾಗಿದ್ದು ನಿಜ. ಇಷ್ಟೆಲ್ಲ ಸಾಧನೆ ಮಾಡಿದ ರಾಮು ಅವರು ಬಹುಬೇಗನೆ ಕನ್ನಡ ಚಿತ್ರರಂಗವನ್ನು ಬಿಟ್ಟು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದು ನಿಜಕ್ಕೂ ಬೇಸರದ ಸಂಗತಿ.