ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಆರಂಭವನ್ನು ಪಡೆದುಕೊಂಡಿತು. ಟೂರ್ನಿಯಲ್ಲಿ ಇದುವರೆಗೂ 7 ಪಂದ್ಯಗಳನ್ನಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 5 ಪಂದ್ಯಗಳಲ್ಲಿ ಗೆದ್ದು, 2 ಪಂದ್ಯಗಳಲ್ಲಿ ಸೋಲುವುದರ ಮೂಲಕ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ಸಾಮಾಜಿಕ ಕಳಕಳಿಯುಳ್ಳ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ಹೌದು ಈ ಐಪಿಎಲ್ ಟೂರ್ನಿಯ ಪಂದ್ಯವೊಂದರಲ್ಲಿ ನೀಲಿ ಜೆರ್ಸಿ ತೊಟ್ಟು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಆಡಲಿದ್ದಾರೆ. ದೇಶದಾದ್ಯಂತ ಕೊರೊನಾವೈರಸ್ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ತೀರ್ಮಾನವನ್ನು ತೆಗೆದುಕೊಂಡಿದೆ. ಕೊರೊನಾವೈರಸ್ ವಿರುದ್ಧ ಹಗಲು ಇರುಳೆನ್ನದೆ ಹೋರಾಡಿ ಕೊರೊನಾ ವಾರಿಯರ್ಸ್ ಪಟ್ಟ ಶ್ರಮಕ್ಕೆ ಗೌರವ ಸೂಚಿಸುವ ಉದ್ದೇಶದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನೀಲಿ ಜೆರ್ಸಿಯನ್ನು ತೊಟ್ಟು ಪಂದ್ಯವನ್ನಾಡಲಿದೆ. ಹಾಗೂ ಈ ಪಂದ್ಯದಲ್ಲಿ ಬಳಸುವ ಮ್ಯಾಚ್ ಕಿಟ್ ಮೇಲೆ ಕೊರೊನಾ ವಾರಿಯರ್ಸ್ ಕುರಿತು ವಿಶೇಷ ಸಂದೇಶವನ್ನು ಬರೆಯಲಾಗಿರುತ್ತದೆ.
ಹೀಗೆ ಸಂದೇಶವುಳ್ಳ ನೀಲಿ ಜೆರ್ಸಿ ತೊಟ್ಟು ಪಂದ್ಯವನ್ನಾಡಿ ಕಳೆದ ವರ್ಷ ಪಿಪಿಇ ಕಿಟ್ ಧರಿಸಿ ಕೊರೊನಾ ಮಹಾಮಾರಿ ವಿರುದ್ಧ ಹೋರಾಡಿ ಕೊರೊನಾ ವಾರಿಯರ್ಸ್ ಪಟ್ಟ ಶ್ರಮಕ್ಕೆ ಗೌರವ ಸಲ್ಲಿಸುವುದು ಮಾತ್ರವಲ್ಲದೆ, ಪಂದ್ಯ ಮುಗಿದ ನಂತರ ನೀಲಿ ಜೆರ್ಸಿಗಳ ಮೇಲೆ ತಂಡದ ಆಟಗಾರರ ಸಹಿಗಳನ್ನು ಹಾಕಿ ಅವುಗಳನ್ನು ಹರಾಜಿನಲ್ಲಿ ಮಾರಾಟ ಮಾಡುವ ಮೂಲಕ ಬಂದ ಹಣವನ್ನು ಕೊರೊನಾ ವಿರುದ್ಧದ ಹೋರಾಟಕ್ಕೆ ನೀಡಲಾಗುವುದು ಎಂದು ಆರ್‌ಸಿಬಿ ತಿಳಿಸಿದೆ. ಅಷ್ಟೇ ಅಲ್ಲದೆ ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಆಕ್ಸಿಜನ್ ಸರಬರಾಜು ಮಾಡುವುದಕ್ಕೂ ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆರ್ಥಿಕ ಸಹಾಯ ಮಾಡಲಿದೆ ಎಂದು ಆರ್‌ಸಿಬಿ ತಿಳಿಸಿದೆ. ಇಷ್ಟು ವರ್ಷ ಪಂದ್ಯವೊಂದರಲ್ಲಿ ಪ್ಲಾಸ್ಟಿಕ್ ಮರುಬಳಕೆ ಕುರಿತು ಸಂದೇಶವನ್ನು ರವಾನಿಸಲು ಹಸಿರು ಜೆರ್ಸಿ ತೊಟ್ಟು ಆಡುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಕೊರೊನಾ ವಾರಿಯರ್ಸ್ ಪಟ್ಟ ಶ್ರಮಕ್ಕೆ ಗೌರವವನ್ನು ಸಲ್ಲಿಸಲು ನೀಲಿ ಜೆರ್ಸಿ ತೊಟ್ಟು ಆಡಲಿದೆ.