ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಅಬ್ಬರ ಮುಂದುವರಿದಿದ್ದು ಗುರುವಾರ 49,058 ಹೊಸ ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ಕರ್ನಾಟಕದಲ್ಲಿ ದೃಢಪಟ್ಟ ಸೋಂಕಿನ ಪ್ರಕರಣಗಳ ಸಂಖ್ಯೆ 17,90,104ಕ್ಕೆ ಏರಿಕೆಯಾಗಿದೆ.
ಸೋಂಕಿನ ಪ್ರಕರಣಗಳು ತೀವ್ರ ಏರಿಕೆಯಾಗುತ್ತಿದ್ದರೂ ಸ್ಯಾಂಪಲ್ ಪರೀಕ್ಷೆಗಳು ಮಾತ್ರ ಹೆಚ್ಚುತ್ತಿಲ್ಲ. ಪರಿಣಾಮ ಪಾಸಿಟಿವಿ ದರ ಗರಿಷ್ಠ ಮಟ್ಟದಲ್ಲಿದೆ. ಕಳೆದ 24 ಗಂಟೆಗಳ ಅಂತರದಲ್ಲಿ 1,64,441 ಸ್ಯಾಂಪಲ್‌ಗಳನ್ನಷ್ಟೆ ಪರೀಕ್ಷೆಗೆ ಒಳಪಡಿಸಲಾಗಿದೆ. ಇವುಗಳಲ್ಲಿ ಪಾಸಿಟಿವಿಟಿ ದರ ಸರಿ ಸುಮಾರು ಶೇ. 30ರಷ್ಟಿದೆ (29.83%). ರಾಜ್ಯದಲ್ಲಿ ಪಾಸಿಟಿವಿ ದರ ಇಳಿಕೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ, ಬದಲಿಗೆ ಏರಿಕೆಯಾಗುತ್ತಿವೆ.
ಬೆಂಗಳೂರಿನಲ್ಲೇ 139 ರೋಗಿಗಳು ಸೋಂಕಿಗೆ ಬಲಿಯಾಗಿದ್ದರೆ, ಬಳ್ಳಾರಿಯಲ್ಲಿ 26, ಮೈಸೂರಿನಲ್ಲಿ 18, ಶಿವಮೊಗ್ಗದಲ್ಲಿ 16, ಕಲಬುರಗಿಯಲ್ಲಿ 14, ತುಮಕೂರಿನಲ್ಲಿ 14, ಪುಟಾಣಿ ಜಿಲ್ಲೆ ಕೊಡಗಿನಲ್ಲಿ 12 ಕೊರೊನಾ ಸೋಂಕಿತರು ಒಂದೇ ದಿನ ನಿಧನರಾಗಿದ್ದಾರೆ. ಹೆಚ್ಚಿನ ಸಕ್ರಿಯ ಪ್ರಕಣಗಳು ಇರದ ಶಿವಮೊಗ್ಗ ಮತ್ತು ಕೊಡಗಿನಲ್ಲಿ ಒಂದೇ ದಿನ 10ಕ್ಕಿಂತ ಹೆಚ್ಚು ಸಾವು ಸಂಭವಿಸಿರುವುದು ಅಚ್ಚರಿ ಹುಟ್ಟಿಸಿದೆ.
ಗುರುವಾರ ಬೆಂಗಳೂರಿನಲ್ಲಿ 23,706 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಇನ್ನು ಮೈಸೂರಿನಲ್ಲಿ 2531, ತುಮಕೂರಿನಲ್ಲಿ 2418, ಕಲಬುರಗಿ 1652, ಉಡುಪಿಯಲ್ಲಿ 1526, ಹಾಸನದಲ್ಲಿ 1403, ಮಂಡ್ಯದಲ್ಲಿ 1301, ದಕ್ಷಿಣ ಕನ್ನಡದಲ್ಲಿ 1191 ಹೊಸ ಕೋವಿಡ್ ಕೇಸ್‌ಗಳು ವರದಿಯಾಗಿವೆ.
ಉಳಿದೆಲ್ಲ ಜಿಲ್ಲೆಗಳಲ್ಲಿ 1 ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ಬೆಳಕಿಗೆ ಬಂದಿವೆ. ಒಟ್ಟು 23 ಜಿಲ್ಲೆಗಳಲ್ಲಿ 500ಕ್ಕಿಂತ ಹೆಚ್ಚು ಕೇಸ್‌ಗಳು ವರದಿಯಾಗಿದ್ದು, ಕೇವಲ 7 ಜಿಲ್ಲೆಗಳಲ್ಲಿ ಮಾತ್ರ 500ಕ್ಕಿಂತ ಕಡಿಮೆ ಪ್ರಕರಣಗಳು ದೃಢಪಟ್ಟಿವೆ.
ಗುರುವಾರ 18,943 ರೋಗಿಗಳು ಕೊರೊನಾದಿಂದ ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ ರಾಜ್ಯದಲ್ಲಿ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 12,55,797ಕ್ಕೆ ತಲುಪಿದೆ.
ಆದರೆ ಹೊಸ ಪ್ರಕರಣಗಳಿಗೂ ಕೊರೊನಾದಿಂದ ಚೇತರಿಸಿಕೊಳ್ಳುತ್ತಿರುವವರಿಗೂ ಅಜಗಜಾಂತರ ವ್ಯತ್ಯಾಸವಿದೆ. ಪರಿಣಾಮ ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 5,17,075ಕ್ಕೆ ಹೆಚ್ಚಳವಾಗಿದೆ. ಮಹಾರಾಷ್ಟ್ರ (6.41 ಲಕ್ಷ) ಬಿಟ್ಟರೆ ರಾಜ್ಯದಲ್ಲೇ ಗರಿಷ್ಠ ಸಕ್ರಿಯ ಪ್ರಕರಣಗಳಿವೆ. ಹೀಗೆ ಮುಂದುವರಿದಲ್ಲಿ ಮಹಾರಾಷ್ಟ್ರವನ್ನೂ ಹಿಂದಿಕ್ಕುವ ದಿನಗಳು ದೂರವಿಲ್ಲ.
ಬೆಂಗಳೂರಿನಲ್ಲಿಯೇ 3,32,732 ಸಕ್ರಿಯ ಪ್ರಕರಣಗಳಿವೆ. ಇಡೀ ದೇಶದಲ್ಲೇ ಮಹಾರಾಷ್ಟ್ರ ಮತ್ತು ಕೇರಳ ಬಿಟ್ಟರೆ ಬೇರಾವ ರಾಜ್ಯದಲ್ಲಿಯೂ ಇಷ್ಟೊಂದು ಸಕ್ರಿಯ ಪ್ರಕರಣಗಳಿಲ್ಲ. ಯಾವತ್ತೂ ಕೊರೊನಾ ಸ್ಫೋಟಕ್ಕೆ ಸಾಕ್ಷಿಯಾಗುವ ಮುಂಬಯಿಯಲ್ಲೂ ಇಲ್ಲಿಯವರೆಗೆ ಆಕ್ಟಿವ್ ಕೇಸ್‌ಗಳ ಸಂಖ್ಯೆ ಲಕ್ಷ ಮುಟ್ಟಿಲ್ಲ. ಆದರೆ ಬೆಂಗಳೂರಿನ ಸಕ್ರಿಯ ಪ್ರಕರಣಗಳು ಅದಾಗಲೇ 3 ಲಕ್ಷ ದಾಟಿ ಮುನ್ನುಗ್ಗುತಿದೆ.
ಬೆಂಗಳೂರನ್ನೂ ಸೇರಿಸಿ ರಾಜ್ಯದಲ್ಲಿ 8 ಜಿಲ್ಲೆಗಳಲ್ಲಿ 10 ಸಾವಿರಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳಿವೆ.
ನಂಬಿದರೆ ನಂಬಿ, ಹಲವು ರಾಜ್ಯಗಳಲ್ಲಿ ಪ್ರತಿ ದಿನ 18 ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತಿರುವ ಲಸಿಕೆಯಷ್ಟನ್ನೂ ಕರ್ನಾಟಕದಲ್ಲಿ ನೀಡಲಾಗುತ್ತಿಲ್ಲ. ಗುರುವಾರ ಕರ್ನಾಟಕದಲ್ಲಿ ಕೇವಲ 21,425 ಡೋಸ್ ಲಸಿಕೆ ನೀಡಲಾಗಿದೆ. ಇವರಲ್ಲಿ 18-44 ವರ್ಷದ ನಡುವಿನವರು ಜಸ್ಟ್ 363 ಜನರು! ಇಲ್ಲಿಯವರೆಗೆ ಕರ್ನಾಟಕದಲ್ಲಿ 1,01,34,203 ಡೋಸ್ ಲಸಿಕೆ ನೀಡಲಾಗಿದೆ.
ಹಾಗಂತ ಲಸಿಕೆಯ ಕೊರತೆ ಇದೆ ಎಂದುಕೊಳ್ಳಬೇಡಿ. ಹಾಗೇನೂ ಇಲ್ಲ ಎನ್ನುತ್ತಿದೆ ಕೇಂದ್ರ ಆರೋಗ್ಯ ಇಲಾಖೆಯ ವರದಿ. ಗುರುವಾರ ಬೆಳಿಗ್ಗೆ 11.16ಕ್ಕೆ ಇಲಾಖೆ ಬಿಡುಗಡೆ ಮಾಡಿರುವ ದಾಖಲೆ ಪ್ರಕಾರ ಕರ್ನಾಟಕದಲ್ಲಿ ಇನ್ನೂ 5,06,578 ಡೋಸ್ ಲಸಿಕೆ ಲಭ್ಯವಿದೆ. ಕೆಲವೇ ಕೆಲವು ರಾಜ್ಯಗಳಲ್ಲಿ ಮಾತ್ರ ಇಷ್ಟು ಪ್ರಮಾಣದ ಲಸಿಕೆ ಇದೆ.
ಹೀಗಿದ್ದೂ ಲಸಿಕೆ ಅಭಿಯಾನ ವೇಗ ಪಡೆದುಕೊಳ್ಳುತ್ತಿಲ್ಲ. ಕೆಲವು ಜಿಲ್ಲೆಗಳಿಂದ ಲಸಿಕೆ ಇಲ್ಲ ಎಂಬ ವರದಿಗಳು ಬರುತ್ತಿವೆ. ಇಷ್ಟೊಂದು ಸಂಗ್ರಹ ಇದ್ದೂ ಜಿಲ್ಲೆಗಳಲ್ಲಿ ಲಸಿಕೆ ಸಂಗ್ರಹ ಯಾಕಿಲ್ಲ? ಲಸಿಕೆ ಅಭಿಯಾನ ಯಾಕೆ ಇಷ್ಟೊಂದು ನಿಧಾನಗೊಂಡಿದೆ? ಸಚಿವರು, ಸರಕಾರವೇ ಉತ್ತರಿಸಬೇಕಿದೆ!