ತಿರುವನಂತಪುರ: ಕೇರಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ನೂತನವಾಗಿ ಅಧಿಕಾರಕ್ಕೆ ಬಂದಿರುವ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ವಲಸೆ ಕಾರ್ಮಿಕರು ಸೇರಿದಂತೆ ರಾಜ್ಯದ ಪ್ರತಿಯೊಂದು ಕುಟುಂಬಕ್ಕೆ ಮೇ 15 ರಿಂದ ಉಚಿತ ಆಹಾರ ಕಿಟ್ ವಿತರಿಸಲು ಮುಂದಾಗಿದೆ.
ಕೊರೊನಾ ಎರಡನೇ ಅಲೆಯಿಂದಾಗಿ ಇದೀಗ ಕೇರಳದಲ್ಲಿ ಲಾಕ್‍ಡೌನ್ ಘೋಷಣೆ ಮಾಡಲಾಗಿದೆ. ಈ ವೇಳೆ ಯಾವುದೇ ಒಬ್ಬ ನಾಗರಿಕನಿಗೂ ಕೂಡ ಆಹಾರಕ್ಕೆ ಸಮಸ್ಯೆ ಆಗಬಾರೆಂಬ ನಿಟ್ಟಿನಲ್ಲಿ ಅಲ್ಲಿನ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.
ಈ ಕುರಿತು ಟ್ವಿಟ್ಟರ್ ಮೂಲಕ ತಿಳಿಸಿರುವ ಪಿಣರಾಯಿ ವಿಜಯನ್, ಲಾಕ್‍ಡೌನ್ ಅವಧಿಯಲ್ಲಿ ಯಾರೊಬ್ಬರೂ ಕೂಡ ಹಸಿವಿನಿಂದ ಒದ್ದಾಡಬಾರದು. ಹಾಗಾಗಿ ಮುಂದಿನ ವಾರದಿಂದ ರಾಜ್ಯದಲ್ಲಿರುವ ವಲಸೆ ಕಾರ್ಮಿಕರು ಸೇರಿ ಪ್ರತಿಯೊಂದು ಕುಟುಂಬಕ್ಕೂ ಕೂಡ ಉಚಿತ ಆಹಾರ ಕಿಟ್ ವಿತರಣೆಗೆ ನಿರ್ಧರಿಸಲಾಗಿದೆ. ನಿಮ್ಮ ಸ್ಥಳೀಯ ಆಡಳಿತವು ನಿಮಗೆ ಆಹಾರ ಕಿಟ್‍ಗಳನ್ನು ತಲುಪಿಸುವ ಕಾರ್ಯ ಮಾಡಲಿದೆ ಎಂದು ಭರವಸೆ ನೀಡಿದ್ದಾರೆ.
ಇದಲ್ಲದೆ ಸ್ಥಳೀಯ ಆಡಳಿತ ಯಾರಿಗೆ ಆಹಾರದ ಅವಶ್ಯಕತೆ ಇದೆ ಅಂತವರಿಗೆ ಕಮ್ಯೂನಿಟಿ ಕಿಚನ್ ತೆರೆದು ಆಹಾರ ಕೊಡುವಂತೆ ಸೂಚಿಸಿದ್ದಾರೆ. ಸರ್ಕಾರದಿಂದ ಬರುವ ಆಹಾರ ಕಿಟ್‍ನಲ್ಲಿ ಒಟ್ಟು 10 ಬಗೆಯ ಸಾಮಾಗ್ರಿಗಳಿರಲಿದ್ದು, ತೊಗರಿ ಬೇಳೆ 500ಗ್ರಾಂ, ಹೆಸರು ಕಾಳು 500ಗ್ರಾಂ, ಸಕ್ಕರೆ 1 ಕೆ.ಜಿ, ಚಹ ಪುಡಿ 100 ಗ್ರಾಂ, ಮೆಣಸಿನ ಪುಡಿ 100 ಗ್ರಾಂ, ಅರಶಿನ ಪುಡಿ 100 ಗ್ರಾಂ, ಉಪ್ಪು 1 ಕೆ.ಜಿ, ಅಕ್ಕಿ 5 ಕೆ.ಜಿ, ತೆಂಗಿನ ಎಣ್ಣೆ 1 ಲೀಟರ್, ಬಟಾಟೆ 1 ಕೆ.ಜಿ, ಈರುಳ್ಳಿ 1 ಕೆ.ಜಿ ಇರಲಿದೆ ಎಂದು ತಿಳಿಸಿದ್ದಾರೆ.
ಕೇರಳದಲ್ಲಿ ಈಗಾಗಲೇ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದ್ದು, ಅವರಿಗೂ ಕೂಡ ಆಹಾರ ಕಿಟ್ ವಿತರಣೆ ಮಾಡಲು ಮುಂದಾಗಿರುವುದರಿಂದ ಹಲವರ ಹಸಿವನ್ನು ನೀಗಿಸುವ ಕಾರ್ಯಕ್ಕೆ ಕೇರಳ ಸರ್ಕಾರ ಮುಂದಾಗಿದೆ ಎಂದು ಸರ್ಕಾರದ ನಡೆಗೆ ಜನ ಮೆಚ್ಚುಗೆ ಸೂಚಿಸಿದ್ದಾರೆ.