ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳಿಗೇನೂ ಕಡಿಮೆಯಿಲ್ಲ. ಅದರಲ್ಲಿಯೂ ಕೊರೋನಾವೈರಸ್ ಹಾವಳಿ ಹೆಚ್ಚಾದಾಗಿನಿಂದ ಈ ಸುಳ್ಳು ಸುದ್ದಿಗಳ ಹಾವಳಿಯೂ ಸಹ ಹೆಚ್ಚಾಗಿಬಿಟ್ಟಿದೆ. ಇತ್ತೀಚಿಗಷ್ಟೆ ನಟ ದೊಡ್ಡಣ್ಣ ಅವರು ಮೃತಪಟ್ಟಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಬ್ಬಿಸಿದ್ದರು. ಇದನ್ನು ತಿಳಿದ ದೊಡ್ಡಣ್ಣ ಅವರು ವಿಡಿಯೋ ಮೂಲಕ ನಾನಿನ್ನೂ ಬದುಕಿಯೇ ಇದ್ದೇನೆ ನನಗೇನೂ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ಇದೀಗ ದೊಡ್ಡಣ್ಣ ಅವರಿಗೆ ಮಾಡಿದ ರೀತಿಯೇ ಕುರಿ ಪ್ರತಾಪ್ ಅವರ ಕುರಿತು ಸಹ ಕಿಡಿಗೇಡಿಗಳು ಮೃತ ಸುದ್ದಿಯನ್ನು ಹಬ್ಬಿಸಿದ್ದಾರೆ. ಕುರಿ ಪ್ರತಾಪ್ ಅವರ ಆರೋಗ್ಯ ಏರುಪೇರಾಗಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂಬ ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದನ್ನು ಮನಗಂಡ ಕುರಿ ಪ್ರತಾಪ್ ಅವರು ಎಚ್ಚೆತ್ತು ವಿಡಿಯೋ ಮೂಲಕ ನನಗೇನು ಆಗಿಲ್ಲ ನಾನು ಚೆನ್ನಾಗಿಯೇ ಇದ್ದೇನೆ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯ ಸುದ್ದಿ ಹರಿದಾಡ್ತಿದೆ ಎಂದು ನನ್ನ ಕೆಲ ಸ್ನೇಹಿತರು ಕರೆ ಮಾಡಿ ತಿಳಿಸಿದರು ಗಾಬರಿಯಾದ ನಾನು ಈ ಸುಳ್ಳು ಸುದ್ದಿಯ ಕುರಿತು ವಿಡಿಯೋ ಮಾಡಿ ಸ್ಪಷ್ಟನೆ ನೀಡುತ್ತಿದ್ದೇನೆ. ವಿಷಯವನ್ನು ತಿಳಿಯದೆ ಈ ರೀತಿಯ ಸುದ್ದಿಗಳನ್ನು ಹಂಚಲು ಹೋಗಬೇಡಿ ಎಂದು ಕುರಿ ಪ್ರತಾಪ್ ಬೇಸರ ವ್ಯಕ್ತಪಡಿಸಿದರು.