ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇತ್ತೀಚಿಗಷ್ಟೆ ಕೊರೊನಾ ವಿರುದ್ಧದ ಹೋರಾಟಕ್ಕೆ ಅಭಿಯಾನವೊಂದರಡಿ ತಾವೂ ದೇಣಿಗೆ ನೀಡಿ ಹಣವನ್ನು ಸಂಗ್ರಹಿಸುವುದರ ಮೂಲಕ ಮಾನವೀಯತೆಯನ್ನು ಮೆರೆದಿದ್ದರು. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ 2 ಕೋಟಿ ದೇಣಿಗೆ ನೀಡುವುದರ ಮೂಲಕ ಹಣವನ್ನು ಸಂಗ್ರಹಿಸಲು ಆರಂಭಿಸಿ ಒಟ್ಟು 11 ಕೋಟಿ ಹಣವನ್ನು ಈ ಅಭಿಯಾನದಡಿ ಸಂಗ್ರಹಿಸಿ ಕೊರೊನಾ ವಿರುದ್ಧದ ಹೋರಾಟಕ್ಕೆ ನೀಡಿದ್ದರು.
ಇದಾದ ಬಳಿಕ ಇದೀಗ ಮತ್ತೊಮ್ಮೆ ವಿರಾಟ್ ಕೊಹ್ಲಿ ಮಾನವೀಯತೆಯನ್ನು ಮೆರೆದಿದ್ದಾರೆ. ಮಾಜಿ ಕ್ರಿಕೆಟ್ ಆಟಗಾರ್ತಿ ಕೆಎಸ್ ಶ್ರಾವಂತಿ ನಾಯ್ಡು ಅವರ ತಾಯಿ ಕೊರೊನಾ ವೈರಸ್‌ನಿಂದ ಬಳಲುತ್ತಿದ್ದು, ಅವರ ಚಿಕಿತ್ಸೆಗೆ ಹಣದ ಕೊರತೆ ಉಂಟಾದಾಗ ಶ್ರಾವಂತಿಯವರು ಬಿಸಿಸಿಐ, ಹೈದರಾಬಾದ್ ಕ್ರಿಕೆಟ್ ಅಸೋಸಿಯೇಶನ್ ಹಾಗೂ ಇತರ ಕ್ರಿಕೆಟ್ ಬೋರ್ಡ್‌ಗಳಿಗೆ ಹಣ ನೀಡುವಂತೆ ಮನವಿ ಮಾಡಿದ್ದರು. ಈ ವಿಷಯವನ್ನು ಭಾರತದ ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಅವರು ವಿರಾಟ್ ಕೊಹ್ಲಿ ಅವರಿಗೆ ಮುಟ್ಟಿಸಿದ್ದಾರೆ.
ಭಾರತದ ಮಾಜಿ ಕ್ರಿಕೆಟ್ ಆಟಗಾರ್ತಿಯೋರ್ವರ ತಾಯಿಯ ಚಿಕಿತ್ಸೆಗೆ ಹಣದ ಅಗತ್ಯತೆ ಇದೆ ಎಂಬ ವಿಷಯ ತಿಳಿದ ಕೂಡಲೇ ವಿರಾಟ್ ಕೊಹ್ಲಿ 6.77 ಲಕ್ಷ ರೂಪಾಯಿಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ. ಈ ವಿಷಯವನ್ನು ಬಿಸಿಸಿಐ ದಕ್ಷಿಣ ವಲಯದ ಮಾಜಿ ಕನ್ವೀನರ್ ಎನ್ ವಿದ್ಯಾ ಯಾದವ್ ಅವರು ಹಂಚಿಕೊಂಡಿದ್ದು ‘ಸಹಾಯ ಎಂದು ಕೇಳಿದ ಕೂಡಲೇ ವಿರಾಟ್ ಕೊಹ್ಲಿ ಅವರು 6.77 ಲಕ್ಷ ನೀಡುವುದರ ಮೂಲಕ ಸಂಕಷ್ಟದಲ್ಲಿದ್ದ ಶ್ರಾವಂತಿ ನಾಯ್ಡು ಅವರಿಗೆ ನೆರವಾಗಿದ್ದಾರೆ, ನಿಜಕ್ಕೂ ಕೊಹ್ಲಿಯವರದು ದೊಡ್ಡ ವ್ಯಕ್ತಿತ್ವ’ ಎಂದು ಕೊಂಡಾಡಿದ್ದಾರೆ.