ಕೊರೊನಾವೈರಸ್ ಕಾರಣದಿಂದಾಗಿ ಭಾರತದಲ್ಲಿ ನಡೆಯಬೇಕಿದ್ದ ಹಲವಾರು ಟೂರ್ನಿಗಳು ಮುಂದೂಡಲ್ಪಡುತ್ತಿವೆ. ಇತ್ತೀಚೆಗಷ್ಟೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಮುಂದೂಡಲ್ಪಟ್ಟು ತದನಂತರ ಯುಎಇಯಲ್ಲಿ ನಡೆಸಲು ತೀರ್ಮಾನ ಮಾಡಿರುವ ವಿಷಯ ನಿಮಗೆಲ್ಲರಿಗೂ ತಿಳಿದೇ ಇದೆ.
ಐಪಿಎಲ್ ಬೆನ್ನಲ್ಲೇ ಇದೀಗ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನೂ ಸಹ ಮುಂದೂಡಲ್ಪಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಭಾರತ ನೆಲದಲ್ಲಿ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಅಕ್ಟೋಬರ್ ಹಾಗೂ ನವೆಂಬರ್ ತಿಂಗಳುಗಳಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಕೊರೊನಾವೈರಸ್ ಭಾರತದಲ್ಲಿ ತಗ್ಗುವ ಲಕ್ಷಣಗಳು ಕಾಣದೇ ಇರುವುದರಿಂದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಸಹ ಮುಂದೂಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಬಿಸಿಸಿಐನ ಇತ್ತೀಚಿನ ನಡೆ ಇದೀಗ ಟಿ ಟ್ವೆಂಟಿ ವಿಶ್ವಕಪ್ ಮುಂದೂಡಿಕೆಯ ಸುದ್ದಿಗೆ ಪುಷ್ಟಿ ನೀಡುವಂತಿದೆ. ಹೌದು ಜೂನ್ 1ರಂದು ಐಸಿಸಿ ಮಂಡಳಿ ಸಭೆ ನಡೆಯಲಿದ್ದು ಈ ಸಭೆಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಭಾರತದಲ್ಲಿ ಟಿ ಟ್ವೆಂಟಿ ವಿಶ್ವಕಪ್ ನಡೆಸುವುದರ ಕುರಿತು ಅಂತಿಮ ತೀರ್ಮಾನವನ್ನು ಕೈಗೊಳ್ಳಲು ಒಂದು ತಿಂಗಳ ಕಾಲಾವಕಾಶ ನೀಡಬೇಕೆಂದು ಐಸಿಸಿಗೆ ಮನವಿ ಮಾಡಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಬಿಸಿಸಿಐ ಮಾಡಲಿರುವ ಈ ಮನವಿಯನ್ನು ಐಸಿಸಿ ಒಪ್ಪುತ್ತಾ ಅಥವಾ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸುತ್ತಾ ಎಂಬುದನ್ನು ಕಾದು ನೋಡಬೇಕು.