ನಟಿ ಪ್ರಣಿತಾ ಸುಭಾಷ್ ವಿವಾಹವಾಗಿರುವ ಸುದ್ದಿ ಇಂದು ಹಠಾತ್ತನೆ ಹೊರ ಬಿದ್ದಿದೆ. ಶುಕ್ರವಾರವಷ್ಟೆ ಮಾಧ್ಯಮದವರೊಟ್ಟಿಗೆ ಮಾತನಾಡಿ ‘ಮದುವೆ ಆಗಿಲ್ಲ. ಒಂದೊಮ್ಮೆ ಆದರೆ ನಿಮಗೆ ತಿಳಿಸದೇ ಇರುತ್ತೇನಾ?’ ಎಂದಿದ್ದ ಪ್ರಣಿತಾ ಗುಟ್ಟಾಗಿ ಮದುವೆ ಆಗಿದ್ದು, ಮದುವೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.
ಪ್ರಣಿತಾ ಕೆಲವು ದಿನಗಳ ಹಿಂದೆಯೇ ಕನಕಪುರ ರಸ್ತೆಯ ರೆಸಾರ್ಟ್ ಒಂದರಲ್ಲಿ ವಿವಾಹವಾಗಿದ್ದಾರೆ ಎನ್ನಲಾಗುತ್ತಿತ್ತು. ಆದರೆ ತಮ್ಮ ಮದುವೆ ಸುದ್ದಿ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿರುವ ಪ್ರಣಿತಾ, ‘ಮೇ 30 ರಂದು ಕೆಲವೇ ಕುಟುಂಬದ ಸದಸ್ಯರ ಮುಂದೆ ಸರಳವಾಗಿ ವಿವಾಹವಾಗಿದ್ದೇನೆ’ ಎಂದಿದ್ದಾರೆ.
ಮುಂದುವರೆದು, ‘ನಿಮಗೆಲ್ಲ ಮಾಹಿತಿ ತಿಳಿಸಲು ಸಾಧ್ಯವಾಗದೇ ಇದ್ದುದ್ದಕ್ಕೆ ನಾವು ಬೇಸರ ವ್ಯಕ್ತಪಡಿಸುತ್ತೇವೆ. ಮದುವೆ ದಿನಾಂಕ ಬಹಳ ತಡವಾಗಿ ಅಂತಿಮವಾದ ಕಾರಣ ಯಾರಿಗೂ ಮಾಹಿತಿ ನೀಡಲಾಗಲಿಲ್ಲ’ ಎಂದಿದ್ದಾರೆ. ಮೇ 29ರ ವರೆಗೆ ಮದುವೆ ದಿನಾಂಕ ನಿಗದಿಯಾಗಿರಲಿಲ್ಲ. ಅಚಾನಕ್ಕಾಗಿ ದಿನಾಂಕ ನಿಗದಿಯಾಗಿ ಮದುವೆ ಆಗಬೇಕಾಯಿತು ಎಂದಿದ್ದಾರೆ ಪ್ರಣಿತಾ.
‘ಕೋವಿಡ್ ನಿಯಮಾವಳಿಗಳು ಇರುವ ಕಾರಣ ಮದುವೆ ನಡೆಯುತ್ತದೆಯೋ ಇಲ್ಲವೊ ಎಂಬ ಬಗ್ಗೆ ನಮಗೆ ಸಹ ಗ್ಯಾರೆಂಟಿ ಇರಲಿಲ್ಲ. ನಮ್ಮ ಮದುವೆ ದಿನಾಂಕ ಘೋಷಿಸಿ ಮತ್ತೆ ಮುಂದೂಡುವುದು ಎಲ್ಲ ಇಷ್ಟವಿಲ್ಲದ ಕಾರಣ ನಾವು ಹಠಾತ್ ನಿರ್ಣಯ ತೆಗೆದುಕೊಂಡೆವು ಎಂದಿದ್ದಾರೆ ಪ್ರಣಿತಾ.