ಬೆಂಗಳೂರು: ಕೊರೊನಾ ವೈರಸ್‍ನಿಂದ ಸಂಕಷ್ಟದಲ್ಲಿರುವ ಜನರಿಗಾಗಿ ಪ್ರತಿನಿತ್ಯ ಶ್ರಮಪಟ್ಟು ಕೆಲಸ ಮಾಡುತ್ತಿರುವ ಕೊರೊನಾ ವಾರಿಯರ್ಸ್‍ಗೆ ನಟ ನಿಖಿಲ್ ಕುಮಾರ್ ಸ್ವಾಮಿ ಸಹಾಯ ಮಾಡಿದ್ದಾರೆ.
ರಾಮನಗರದ ಜಿಲ್ಲಾ ವೈದ್ಯಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 430 ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರು, ಸ್ಟಾಫ್ ನರ್ಸ್‍ಗಳಿಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ್ ಸ್ವಾಮಿಯವರು ಗೌರವಧನ ನೀಡಿ, ನೆಬ್ಯುಲೈಜೇಷನ್ ಮೆಷಿನ್ ವಿತರಿಸುವ ಮೂಲಕ ನೆರವು ನೀಡಿದ್ದಾರೆ.
ಇತ್ತೀಚೆಗೆ ಲಾಕ್‍ಡೌನ್ ವೇಳೆ ನಿಖಿಲ್ ಕುಮಾರಸ್ವಾಮಿಯವರು ರಾಮನಗರದಲ್ಲಿರುವ ತಮ್ಮ ಜಮೀನಿನಲ್ಲಿ ಕೃಷಿ ಮಾಡುವ ಮೂಲಕ ಗಮನ ಸೆಳೆದಿದ್ದರು. ಕೆಲವು ದಿನಗಳ ಹಿಂದೆ ನಿಖಿಲ್ ಕುಮಾರ್ ಸ್ವಾಮಿ ಹಾಗೂ ಅವರ ತಂದೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರಿಗೆ ಕೊರೊನಾ ಸೋಂಕು ಧೃಡಪಟ್ಟಿತ್ತು. ಇದೀಗ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಸದ್ಯ ನಿಖಿಲ್ ಕುಮಾರಸ್ವಾಮಿ ಸೀತಾರಾಮ ಕಲ್ಯಾಣ ಸಿನಿಮಾದ ನಂತರ ರೈಡರ್ ಸಿನಿಮಾದಲ್ಲಿ ಅಭಿನಯಿಸಿದ್ದು, ಸಿನಿಮಾದ ಬಹುತೇಕ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಪ್ರತಿ ಚಿತ್ರದಲ್ಲಿ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡುವ ನಿಖಿಲ್ ಈ ಚಿತ್ರದಲ್ಲಿ ಹೇಗೆ ನಟಿಸಿದ್ದಾರೆ ಎಂದು ಕಾದು ನೋಡಬೇಕಾಗಿದೆ.