ಕೊರೊನಾ ಲಾಕ್‌ಡೌನ್‌ನಿಂದಾಗಿ ಕಳೆದ ವರ್ಷದಿಂದಲೂ ಸಿನಿಮಾ ಕಾರ್ಮಿಕರಿಗೆ, ಕಲಾವಿದರಿಗೆ ಕೆಲಸ ಇಲ್ಲದಂತಾಗಿದೆ. ಸಿನಿಮಾ ಕಾರ್ಮಿಕರು, ಪೋಷಕ ಕಲಾವಿದರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ.
ಸಿನಿಮಾ ಕಾರ್ಮಿಕರ ಹಾಗೂ ಕಲಾವಿದರ ಸಂಕಷ್ಟಕ್ಕೆ ಸ್ಪಂದಿಸಿರುವ ನಟ ಯಶ್, ತಮ್ಮ ಸಂಪಾದನೆಯ ಹಣದಿಂದ ಕಲಾವಿದರ ಹಾಗೂ ಸಿನಿಮಾ ಕಾರ್ಮಿಕರ ಖಾತೆಗಳಿಗೆ ಐದು ಸಾವಿರ ಹಣ ಹಾಕುವುದಾಗಿ ನಿನ್ನೆಯಷ್ಟೆ ಘೋಷಿಸಿದ್ದರು. ಯಶ್ ಅವರ ಈ ಮಹತ್ವದ ಕಾರ್ಯಕ್ಕೆ ನಟ ಉಪೇಂದ್ರ ಸೇರಿದಂತೆ ಹಲವಾರು ಮಂದಿ ಅಭಿನಂದನೆಗಳನ್ನು ಸಲ್ಲಿಸಿದ್ದರು.
ಹೇಳಿದ್ದ ಒಂದೇ ದಿನದಲ್ಲಿ ಕಾರ್ಯ ಆರಂಭ ಮಾಡಿರುವ ನಟ ಯಶ್, ಹಲವಾರು ಮಂದಿ ಕಾರ್ಮಿಕರಿಗೆ, ಕಲಾವಿದರ ಖಾತೆಗಳಿಗೆ 5000 ಹಣ ಜಮಾವಣೆ ಮಾಡಿದ್ದಾರೆ.
ಮೀಸೆ ಪ್ರಕಾಶ್, ಮಂಜೇಗೌಡ, ಮೈಸೂರು ಶಿವಪ್ರಕಾಶ್ ಇನ್ನೂ ಹಲವಾರು ಮಂದಿ ಕಲಾವಿದರು, ಸಿನಿಮಾ ಕಾರ್ಮಿಕರುಗಳು ತಮ್ಮ ಖಾತೆಗೆ ಯಶ್ ಹಾಕಿರುವ ಹಣ ಬಂದಿರುವುದಾಗಿ ಖಾತ್ರಿ ಪಡಿಸಿದ್ದಾರೆ. ಕೆಲವರು ಸಾಮಾಜಿಕ ಜಾಲತಾಣ ಮೂಲಕ ಯಶ್‌ಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಮೂರು ಸಾವಿರಕ್ಕೂ ಹೆಚ್ಚು ಕಲಾವಿದರಿಗೆ 5000 ಹಣವನ್ನು ಖಾತೆಗೆ ಹಾಕುವುದಾಗಿ ಯಶ್ ಹೇಳಿದ್ದರು. ಅದರಂತೆ 1.50 ಕೋಟಿ ರುಪಾಯಿಗಳನ್ನು ಯಶ್ ಸಿನಿಮಾ ಕಾರ್ಮಿಕರು ಮತ್ತು ಕಲಾವಿದರಿಗೆ ನೀಡುತ್ತಿದ್ದಾರೆ.