ಕರ್ನಾಟಕದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ. ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಪರೀಕ್ಷೆ ನಡೆಸದಿರಲು ಸರ್ಕಾರ ನಿರ್ಧರಿಸಿದೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಶುಕ್ರವಾರ ತಿಳಿಸಿದ್ದರು.
ಪೂರ್ವಭಾವಿ ಪರೀಕ್ಷೆಗಳಲ್ಲಿ ಪಡೆದ ಅಂಕಗಳನ್ನು ಆಧಾರವಾಗಿ ಇಟ್ಟುಕೊಂಡು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲಾಗುವುದು. ಆಗ ಪಡೆದ ಅಂಕಗಳ ಆಧಾರದ ಮೇಲೆ ಈಗ ಮಾನದಂಡ ನಿಗದಿ ಮಾಡುತ್ತೇವೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಅದೇ ರೀತಿ ಎಸ್ಎಸ್ಎಲ್‌ಸಿ ಅಂಕಗಳನ್ನೂ ಪರಿಗಣಿಸಿ ದ್ವಿತೀಯ ಪಿಯು ಫಲಿತಾಂಶ ಘೋಷಣೆ ಮಾಡುತ್ತೇವೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಪ್ರಕಟಣೆ ಹೊರಡಿಸಿದ್ದಾರೆ.
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ನ್ಯಾಯಯುತವಾಗಿರಲು ಈ ನಡೆಯನ್ನು ಅನುಸರಿಸುತ್ತಿದ್ದೇವೆ. ಈ ಕುರಿತು ಅಧಿಕಾರಿಗಳಿಗೆ ಸಚಿವ ಸುರೇಶ್ ಕುಮಾರ್ ಸೂಚನೆ ನೀಡಿದರು.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಅಂಕಿ-ಅಂಶ ಪಡೆಯಬೇಕು ಎಂದು ಸೂಚಿಸಲಾಗಿದ್ದು, ಜೊತೆಗೆ ಪ್ರಥಮ ಪಿಯುಸಿ ಅಂಕಗಳೊಂದಿಗೆ ಸೂಕ್ತ ರೀತಿಯಲ್ಲಿ ಹೊಂದಿಸಲೂ ಆದೇಶಿಸಲಾಗಿದೆ. ಜೂನ್ ಮಾಸಾಂತ್ಯಕ್ಕೆ ಗ್ರೇಡಿಂಗ್ ಫಲಿತಾಂಶ ಘೋಷಿಸಲು ನಿರ್ಧರಿಸಲಾಗಿದೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.