ಬ್ರಾಹ್ಮಣ್ಯ ಹಾಗೂ ಬ್ರಾಹ್ಮಣರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾದ ಆರೋಪದಡಿ ದಾಖಲಾಗಿರುವ ಪ್ರಕರಣದಲ್ಲಿ ನಟ ಚೇತನ್‌ಗೆ ಬಸವನಗುಡಿ ಠಾಣೆ ಪೊಲೀಸರು ನೋಟಿಸ್ ನೀಡಿದ್ದಾರೆ. ವಿಪ್ರ ಯುವ ವೇದಿಕೆ ಅಧ್ಯಕ್ಷ ಪವನ್ ಕುಮಾರ್ ಶರ್ಮಾ ಎಂಬುವರು ನಟ ಚೇತನ್ ವಿರುದ್ಧ ದೂರು ನೀಡಿದ್ದಾರೆ.
ಧಾರ್ಮಿಕ ಭಾವನೆ ಕೆರಳಿಸುವುದು ಐಪಿಸಿ 129(ಎ) ಹಾಗೂ ದ್ವೇಷ ಭಾವನೆ ಹೆಚ್ಚಿಸುವ ಐಪಿಸಿ 153 (ಬಿ) ಆರೋಪ-ದಡಿ ಎಫ್‌ಐಆರ್ ದಾಖಲಾಗಿದೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ. ”ಪ್ರಕರಣಕ್ಕೆ ಸಂಬಂಧಪಟ್ಟ ವಿಡಿಯೋಗಳನ್ನು ಯೂಟ್ಯೂಬ್ ಹಾಗೂ ಫೇಸ್‌ಬುಕ್ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ವಿಡಿಯೊಗಳನ್ನು ಯಾವ ಐಡಿಗಳಿಂದ ಅಪ್‌ಲೋಡ್ ಮಾಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಿ ತನಿಖೆಗೆ ಸಹಕರಿಸಬೇಕು” ಎಂದು ನೋಟಿಸ್‌ನಲ್ಲಿ ಪೊಲೀಸರು ಕೋರಿದ್ದಾರೆ. ಬುಧವಾರ ಬೆಳಗ್ಗೆ ಬಸವನಗುಡಿ ಠಾಣೆಗೆ ಹೋಗುತ್ತಿದ್ದೇನೆ ಎಂದು ಚೇತನ್ ಹೇಳಿದ್ದಾರೆ.
ಬ್ರಾಹ್ಮಣ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ನಟ ಚೇತನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಕೆ.ದಿವಾಕರ್ ಅವರು ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ಆಗ್ರಹಿಸಿದ್ದಾರೆ.