ಪಣಜಿ, ಜೂನ್ 17: ಗೋವಾದಲ್ಲಿ ಪ್ರತಿಯೊಬ್ಬರು ಮೊದಲ ಕೊರೊನಾ ಲಸಿಕೆ ಪಡೆದ ಬಳಿಕವಷ್ಟೇ ಪ್ರವಾಸಿಗರಿಗೆ ರಾಜ್ಯಕ್ಕೆ ಬರಲು ಅನುಮತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿಳಿಸಿದ್ದಾರೆ.
ಜುಲೈ 30ರೊಳಗೆ ಸರ್ಕಾರವೂ ರಾಜ್ಯದಲ್ಲಿರುವ ಪ್ರತಿಯೊಬ್ಬ ನಾಗರಿಕನಿಗೂ ಮೊದಲ ಲಸಿಕೆಯನ್ನು ನೀಡುವ ಗುರಿ ಹೊಂದಲಾಗಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದು, ಕೊರೊನಾ ನಿಯಮಗಳ ಸಡಿಲಿಕೆ ಮಾಡಲಾಗಿದೆ, ಸಡಿಲಿಕೆ ಎಂದ ಮಾತ್ರಕ್ಕೆ ಪ್ರವಾಸಿಗರಿಗೆ ಸಧ್ಯಕ್ಕೆ ಅವಕಾಶವಿಲ್ಲ, ಪ್ರತಿಯೊಬ್ಬರೂ ಮೊದಲ ಕೊಡೊನಾ ಲಸಿಕೆಯ ಡೋಸ್ ಪಡೆದ ಬಳಿಕವಷ್ಟೇ ಅವಕಾಶ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಹೀಗಾಗಿ ಗೋವಾ ಪ್ರವಾಸೋದ್ಯಮ ಜುಲೈ 30ರ ನಂತರ ಮತ್ತೆ ಆರಂಭವಾಗಲಿದೆ, ನೃತ್ಯ ಹಾಗೂ ಇತರೆ ಸಂಗೀತ ಕಾರ್ಯಕ್ರಮಗಳನ್ನು 2022ರ ಮಾರ್ಚ್ ವರೆಗೆ ಮುಂದೂಡಲಾಗಿದೆ, ರಾಜ್ಯದಲ್ಲಿ ಪ್ರವಾಸಿಗರಿಗೆ ಕ್ವಾರಂಟೈನ್ ಕೇಂದ್ರಗಳನ್ನು ತೆರೆಯಲಾಗಿದೆ.
ಈ ವಾರದ ಆರಂಭದಲ್ಲಿ ಪ್ರಮೋದ್ ಸಾವಂತ್ ಪ್ರವಾಸೋದ್ಯಮ ಕೈಗಾರಿಕೆ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದರು ಹಾಗೂ ಕಠಿಣ ನಿಯಮಗಳನ್ನು ಪಾಲಿಸುವ ಕುರಿತು ಸೂಚನೆ ನೀಡಿದ್ದರು.