ಶರಾವತಿ ನದಿ ಪಾತ್ರದಲ್ಲಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಜೋಗ ಜಲಪಾತ ಮೈದುಂಬಿ ಧುಮ್ಮಿಕ್ಕುತ್ತಿದೆ. ಆದರೆ ಕೋವಿಡ್ ಲಾಕ್‌ಡೌನ್ ಕಾರಣ ಪ್ರವಾಸಿಗರಿಗೆ ಜಲಪಾತ ವೀಕ್ಷಣೆಯನ್ನು ನಿರ್ಬಂಧಿಸಲಾಗಿದೆ.
ಜಲಪಾತದ ಹಿನ್ನೀರು ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಹಾಗಾಗಿ ರಾಜ, ರಾಣಿ, ರೋರರ್, ರಾಕೆಟ್ ಜಲಪಾತಗಳು ಕಳೆಗಟ್ಟಿವೆ. ಜೋರು ಮಳೆ, ದಟ್ಟ ಇಬ್ಬನಿಯ ನಡುವೆ ಜೋಗದ ವೈಭವ ಕಣ್ತುಂಬಿಕೊಳ್ಳುವುದು ಕಣ್ಣಿಗೆ ಸಡಗರ.
ಜೋಗ ಜಲಪಾತ ಕಣ್ತುಂಬಿಕೊಳ್ಳಲು ಇದು ಒಳ್ಳೆಯ ಸಮಯ. ಬೆಂಗಳೂರು ಸೇರಿದಂತೆ ದೂರದ ಊರುಗಳಿಂದ ಜೋಗಕ್ಕೆ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದರು.
ಪ್ರತಿ ಮಳೆಗಾಲದ ವೀಕೆಂಡ್ ಸಂದರ್ಭ ಜೋಗ ನೋಡಲು ಬರುವ ಜನರು ಗಂಟೆಗಟ್ಟಲೆ ಕ್ಯೂ ನಿಂತು ಜಲಪಾತ ವೀಕ್ಷಿಸುತ್ತಿದ್ದರು. ಆದರೆ ಈ ಬಾರಿ ಕೋವಿಡ್ ಮತ್ತು ಲಾಕ್‌ಡೌನ್ ಪರಿಣಾಮ ಜೋಗ ಜಲಾಪತ ವೀಕ್ಷಣೆಗೆ ನಿರ್ಬಂಧ ವಿಧಿಸಲಾಗಿದೆ.
ವಿಡಿಯೋದಲ್ಲಿ ಹಳೆಯ ಜೋಗ; ಶರಾವತಿ ಹಿನ್ನೀರು ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದಂತೆ ಜೋಗ ಜಲಪಾತ ಭೋರ್ಗರೆಯುತ್ತಿದೆ ಎಂದು ನಕಲಿ ವಿಡಿಯೋ, ಫೋಟೋಗಳನ್ನು ಶೇರ್ ಮಾಡಲಾಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಜಿಲ್ಲೆ ಮತ್ತು ಅಕ್ಕಪಕ್ಕದ ಜಿಲ್ಲೆಯ ಪ್ರವಾಸಿಗರು ಜೋಗಕ್ಕೆ ಭೇಟಿ ನೀಡುತ್ತಿದ್ದಾರೆ.
ಆದರೆ ಗೇಟ್ ತನಕ ಬಂದು ನಿರಾಸೆಯಿಂದ ವಾಪಸ್ ಹೋಗುತ್ತಿದ್ದಾರೆ. ಕೆಲವರು ತಮ್ಮನ್ನು ಒಳಗೆ ಬಿಡುವಂತೆ ಭದ್ರತಾ ಸಿಬ್ಬಂದಿಗಳ ಜೊತೆ ಜೊತೆ ಜಗಳವಾಡುತ್ತಿದ್ದಾರೆ.
ಜಲಾಶಯ ಭರ್ತಿಯಾಗಿ ಭಾರೀ ಪ್ರಮಾಣದಲ್ಲಿ ನೀರು ಹೊರಗೆ ಬಿಟ್ಟರೆ ಮಾತ್ರ ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಇರುವಂತೆ ಜೋಗದಲ್ಲಿ ನೀರು ಹರಿಯಲಿದೆ. ಕೋವಿಡ್ ಕಠಿಣ ನಿಯಮ ಮುಂದುವರೆದರೆ ಈ ಬಾರಿ ಸಾರ್ವಜನಿಕರಿಗೆ ಜೋಗ ಜಲಪಾತದ ವೀಕ್ಷಣೆಗೆ ಅಸಾಧ್ಯವಾಗಲಿದೆ.