ಹೈದರಾಬಾದ್: ಒಬ್ಬ ವರನನ್ನು ಇಬ್ಬರೂ ಯುವತಿಯರು ಮದುವೆಯಾಗುವುದಾಗಿ ಪಟ್ಟು ಹಿಡಿದಿದ್ದರು. ಒಂದೇ ಮಂಟಪದಲ್ಲಿ ಈ ಮೂವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ವಿಚಿತ್ರ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.
ಒಂದೇ ಮಂಟಪದಲ್ಲಿ ಕನಕ ಉಶಾರಾಣಿ , ಅದಾ ಸುರೇಖಾ ಇಬ್ಬರು ಯುವತಿಯರನ್ನು ವರ ಅರ್ಜುನ್ ಮದುವೆಯಾಗಿದ್ದಾನೆ. ತೆಲಂಗಾಣದ ಅದಿಲಾಬಾದ್ ಜಿಲ್ಲಾ ಉಟ್ನೂರು ಮಂಡಲಂ ಮನ್ಸೂರ್ನಲ್ಲಿ ವರ ವೆಲಾಡಿ ಅರ್ಜುನ್‍ನನ್ನು ಮದುವೆಯಾಗುವುದಾಗಿ ಈ ಇಬ್ಬರೂ ಯುವತಿಯರು ಪಟ್ಟು ಹಿಡಿದಿದ್ದರು. ಇವರಿಬ್ಬರೂ ಸಂಬಂಧಿಗಳು. ವರ ಪದವೀಧರನಾಗಿದ್ದು, ಇಬ್ಬರೂ ವಧುಗಳು ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಆಶ್ಚರ್ಯವೆಂದ್ರೆ ಯುವತಿಯರಿಬ್ಬರೂ ಕಳೆದ 4 ವರ್ಷಗಳಿಂದ ಅರ್ಜುನನನ್ನು ಪ್ರೀತಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸಂಬಂಧದಲ್ಲಿ ಭಾವನಾಗುತ್ತಿದ್ದ ವೇಲಾಡಿ ಅರ್ಜುನನನ್ನು ಮದುವೆಯಾಗಲು ಕನಕ ಉಶಾರಾಣಿ ಮತ್ತು ಅದಾ ಸುರೇಖಾ ಇಬ್ಬರೂ ಯುವತಿಯ ಪಟ್ಟು ಹಿಡಿದಿದ್ದರು. ಇದಕ್ಕೆ ಸಮಾಜ ಮತ್ತು ಅವರ ಹಿರಿಯರ ವಿರೋಧ ವ್ಯಕ್ತಪಡಿಸಿದರು. ಆದರೆ ಸಮಾಜದ ಹಿರಿಯರ ವಿರೋಧ ಲೆಕ್ಕಿಸದೇ ಯುವತಿಯರ ಕುಟುಂಬಸ್ಥರು ಮದುವೆಗೆ ಮಾತುಕತೆ ನಡೆಸಿ ಒಪ್ಪಿಗೆ ಪಡೆದುಕೊಂಡಿದ್ದಾರೆ. ಇದರಿಂದಾಗಿ ಸಂಭ್ರಮದಿಂದ ಮದುವೆ ನಡೆದಿದೆ. ಗಿರಿಜನ ಸಂಪ್ರದಾಯದಂತೆ ವಿವಾಹ ಮಹೋತ್ಸವ ನಡೆದಿದೆ.