ಕೊರೊನಾ ಹಿನ್ನೆಲೆ ದ್ವಿತೀಯ ಪಿಯು ಪರೀಕ್ಷೆ ರದ್ದುಗೊಳಿಸಿ ಎಲ್ಲ ವಿದ್ಯಾರ್ಥಿಗಳನ್ನು ಪಾಸ್ ಮಾಡುವುದಾಗಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿತ್ತು. ಹಾಗೂ ವಿದ್ಯಾರ್ಥಿಗಳ ಫಲಿತಾಂಶವನ್ನು ಗ್ರೇಡಿಂಗ್ ಮಾದರಿಯಲ್ಲಿ ನೀಡುವುದಾಗಿ ಹೇಳಿತ್ತು. ಆದರೆ ಇದೀಗ ಪದವಿ ಪೂರ್ವ ಶಿಕ್ಷಣ ಇಲಾಖೆ ಬೇರೆಯೇ ಅಲೋಚನೆ ಮಾಡಿದೆ.
ಹೌದು. ದ್ವಿತೀಯ ಪಿಯು ಫಲಿತಾಂಶದಲ್ಲಿ ಗ್ರೇಡಿಂಗ್ ಬದಲು ವಿದ್ಯಾರ್ಥಿಗಳಿಗೆ ಅಂಕಗಳನ್ನೇ ನೀಡಲು ಪದವಿ ಪೂರ್ವ ಶಿಕ್ಷಣ ಇಲಾಖೆ ಅಲೋಚನೆ ನಡೆಸಿದೆ.
ಕರ್ನಾಟಕ ಹೈಕೋರ್ಟ್ ಗುರುವಾರಷ್ಟೇ, ಪುನರಾವರ್ತಿತ ವಿದ್ಯಾರ್ಥಿಗಳ ಫಲಿತಾಂಶ ತಾರತಮ್ಯಕ್ಕೆ ಒಳಗಾಗುವ ಹಿನ್ನೆಲೆ ರಾಜ್ಯ ಪಿಯು ಫಲಿತಾಂಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಪುನರಾವರ್ತಿತ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಪಾಸ್ ಮಾಡುವ ಸಂಬಂಧ ಪದವಿ ಪೂರ್ವ ಶಿಕ್ಷಣ ಇಲಾಖೆಯು ರೂಪಸಿರುವ 12 ತಜ್ಞರ ಸಮಿತಿಗೆ ಈ ಅಂಕಗಳ ನಿರ್ಧಾರದ ಜವಾಬ್ದಾರಿಯನ್ನೂ ಶಿಕ್ಷಣ ಇಲಾಖೆ ನೀಡಿದೆ.
ಸಮಿತಿಯು ಒಮ್ಮೆ ಅಂಕಗಳ ನೀಡಿಕೆ ಫಾರ್ಮುಲ ನೀಡಿದ ಮೇಲೆ ಕೇವಲ ಅಂಕಗಳನ್ನು ನೀಡಬೇಕೆ? ಅಥವಾ ಗ್ರೇಡಿಂಗ್ ಅನ್ನೂ ನೀಡಬೇಕೆ? ಎಂದು ಸರ್ಕಾರದ ಅನುಮತಿ ಪಡೆದು ನಿರ್ಧಾರ ಪ್ರಕಟಿಸಲು ಇಲಾಖೆ ತೀರ್ಮಾನಿಸಿದೆ.
ಗ್ರೇಡಿಂಗ್ ನೀಡುವುದರಿಂದ ಈ ಮಕ್ಕಳನ್ನು ನೋಡುವ ದೃಷ್ಟಿ ಬದಲಾಗಬಹುದು. ಅಲ್ಲದೆ, ಮುಂದೆ ಉದ್ಯೋಗಗಳಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಮಾಧ್ಯಮಗಳು ವರದಿಗಳ ಮೂಲಕ ಎಚ್ಚರಿಕೆ ನೀಡಿದ ಹಿನ್ನೆಲೆ ಪದವಿ ಪೂರ್ವ ಶಿಕ್ಷಣ ಇಲಾಖೆ ತನ್ನ ನಿರ್ಧಾರ ಬದಲಾಯಿಸಿದೆ.
ಎಸ್ಎಸ್‌ಎಲ್‌ಸಿ ಮತ್ತು ಪ್ರಥಮ ಪಿಯು ಅಂಕಗಳನ್ನು ಯಾವ ರೀತಿಯಲ್ಲಿ ಪರಿಗಣಿಸಬೇಕೆಂದು ಅಲೋಚನೆ ಮಾಡುತ್ತಿರುವ ಇಲಾಖೆಯು, ಒಂದು ಫಾರ್ಮುಲಾ ಸಿದ್ಧಪಡಿಸಿದ ನಂತರ ಸರ್ಕಾರದ ಗಮನಕ್ಕೆ ತರಲಿದೆ. ಗ್ರೇಡಿಂಗ್ ಮತ್ತು ಅಂಕ ಎರಡನ್ನೂ ನೀಡಬೇಕೇ? ಅಥವಾ ಯಾವುದು ನೀಡಿದರೆ ಒಳಿತು? ಎಂದು ಅನುಮತಿ ಪಡೆದ ನಂತರ ಶಿಕ್ಷಣ ಇಲಾಖೆ ಅಂತಿಮ ನಿರ್ಧಾರ ಪ್ರಕಟಿಸಲಿದೆ.
ಶಿಕ್ಷಣ ಇಲಾಖೆಯ ಮೂಲಗಳ ಪ್ರಕಾರ ದ್ವಿತೀಯ ಪಿಯು ಫಲಿತಾಂಶಕ್ಕೆ ಅಂಕಗಳನ್ನೇ ನೀಡುವುದಕ್ಕೆ ತೀರ್ಮಾನ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಏಕೆಂದರೆ, ಪರೀಕ್ಷೆ ರದ್ದು ಮಾಡಿರುವುದು ಸರ್ಕಾರ ಆಗಿರುವುದರಿಂದ, ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಇದರಿಂದ ಕಳಂಕ ಎದುರಾಗಬಾರದು. ಎಲ್ಲ ಕಡೆ, ಗ್ರೇಡಿಂಗ್ ನೋಡಿ ಕೊರೊನಾದಿಂದ ಪಾಸ್ ಆದವರು ಎಂದು ಹಿಯಾಳಿಸಿಕೊಳ್ಳಬಾರದು ಎಂಬ ಕಾರಣಕ್ಕೆ ಗ್ರೇಡಿಂಗ್ ಬದಲು ಅಂಕಗಳನ್ನೇ ನೀಡಲು ಇಲಾಖೆ ಆಲೋಚಿಸಿದೆ ಎಂದು ಮೂಲಗಳಿಂದ ತಿಳಿದಿದೆ. ಆದರೆ ಅಂತಿಮವಾಗಿ ಯಾವ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಕಾದುನೋಡಬೇಕಿದೆ.