ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲಿ ಸೈಟೊಮೆಗಾಲೋವೈರಸ್(ಸಿವಿಎಂ) ಸಮಸ್ಯೆಗಳು ಕಾಣಿಸುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಸೈಟೊಮೆಗಾಲೋವೈರಸ್ ವೈರಲ್ ಸೋಂಕಾಗಿದ್ದು, ಕೊರೊನಾ ಸೋಂಕಿನಿಂದ ಗುಣಮುಖರಾದವರನ್ನು ಪೀಡಿಸುತ್ತಿದೆ. ಸ್ಟೀರಾಯ್ಡ್ ಚಿಕಿತ್ಸೆ ಪಡೆದವರಿಗೆ ಈ ಸೋಂಕು ಕಾಡುತ್ತಿದೆ.
ಬೆಂಗಳೂರಿನಲ್ಲಿ ಇಂತಹ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿದೆ. ದೆಹಲಿಯಲ್ಲೂ ಕೂಡ ಇಂತಹ ಪ್ರಕರಣಗಳು ಪತ್ತೆಯಾಗಿದ್ದವು.
ಇದು ಹೊಸ ಮಾದರಿಯ ಆರೋಗ್ಯ ಸಮಸ್ಯೆಯಾಗಿದೆ. ಗುದನಾಳದ ರಕ್ತಸ್ರಾವದ ಬಗ್ಗೆ ಕೆಲವು ರೋಗಿಗಳು ಮೊದಲು ದೂರು ನೀಡಿದ್ದರು, ಪರೀಕ್ಷೆ ಬಳಿಕ ಇದು ಸೈಟೊಮೆಗಾಲೋವೈರಸ್ ಎಂಬುದು ತಿಳಿದುಬಂದಿದೆ.
ಏಪ್ರಿಲ್-ಮೇ ತಿಂಗಳಿನಲ್ಲಿ ಪತ್ತೆಯಾದ ಕೊರೊನಾವೈರಸ್ ಸೋಂಕಿನ ಎರಡನೇ ಅಲೆಯಲ್ಲಿ ಸೋಂಕು ತಗುಲಿರುವ ರೋಗಿಗಳಲ್ಲಿ ಈ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ.
ಕೊವಿಡ್-19 ಸೋಂಕು ತಗುಲಿದ 20 ರಿಂದ 30 ದಿನಗಳಲ್ಲಿ ಪ್ರತಿಕಾಯ ವ್ಯವಸ್ಥೆಯಲ್ಲಿ ಸಮಸ್ಯೆ, ಹೊಟ್ಟೆ ನೋವು ಹಾಗೂ ಗುದನಾಳದಲ್ಲಿ ರಕ್ತಸ್ರಾವ ಆಗುತ್ತಿರುವುದು ಗೊತ್ತಾಗಿದೆ.
ಇಬ್ಬರು ರೋಗಿಗಳಲ್ಲಿ ತೀವ್ರ ರಕ್ತಸ್ರಾವ ಆಗುತ್ತಿದ್ದ ಹಿನ್ನೆಲೆ ಶಸ್ತ್ರಚಿಕಿತ್ಸೆ ನೀಡಲಾಯಿತು. ಅದಾಗ್ಯೂ, ಒಬ್ಬ ರೋಗಿಯು ಎದೆನೋವು ಹಾಗೂ ತೀವ್ರ ರಕ್ತಸ್ರಾವದಿಂದ ಪ್ರಾಣ ಬಿಟ್ಟಿದ್ದಾರೆ ಎಂದು ಹೇಳಲಾಗಿದೆ.