“ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಚುನಾವಣೆ, ಸರ್ಕಾರಿ ಕೆಲಸ, ಸಬ್ಸಿಡಿಗೆ ಅನರ್ಹ”

Date:

ಲಕ್ನೋ: ಜನಸಂಖ್ಯೆ ನಿಯಂತ್ರಣಕ್ಕೆ ಕಠಿಣ ಕಾನೂನು ತರಲು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಮುಂದಾಗಿದೆ.

2ಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸ್ಥಳೀಯ ಚುನಾವಣೆಗಳಲ್ಲಿ ಸ್ಪರ್ಧಿಸುವುದು, ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಹಾಕುವುದು, ಸರ್ಕಾರಿ ಉದ್ಯೋಗದಲ್ಲಿದ್ದರೆ ಮುಂಬಡ್ತಿ ಸೇರಿದಂತೆ ಸಬ್ಸಿಡಿಗೂ ಅನರ್ಹರಾಗುತ್ತಾರೆ ಎಂಬ ಅಂಶ ಈ ಮಸೂದೆಯಲ್ಲಿದೆ. ಇದೇ ರೀತಿ ಎರಡು ಅಥವಾ ಒಂದು ಮಗುವನ್ನು ಹೊಂದಿದ್ದರೆ ಅವರಿಗೆ ಭರಪೂರ ಸೌಲಭ್ಯವನ್ನು ಈ ಕಾನೂನಿನ ಅಡಿಯಲ್ಲಿ ನೀಡಲಾಗುತ್ತದೆ. ಇಂತಹ ಮಹತ್ವದ ಮಸೂದೆಯನ್ನು ಯುಪಿ ಸರ್ಕಾರ ಸಿದ್ಧಪಡಿಸಿದೆ.

ಇಂತಹದ್ದೊಂದು ಹೊಸ ಮಸೂದೆಯನ್ನು ಉತ್ತರ ಪ್ರದೇಶ ಸರ್ಕಾರ ಜಾರಿಗೊಳಿಸುವ ಕುರಿತು ಪ್ರಸ್ತಾವನೆ ಮುಂದಿಟ್ಟಿದೆ. ಉತ್ತರ ಪ್ರದೇಶದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಕರಡು ಪ್ರತಿಯನ್ನು ಸಿದ್ಧಪಡಿಸಿದ್ದು, ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೇ-4ರ ಅಂಕಿ ಅಂಶಗಳನ್ನು ಆಧರಿಸಿ ಜನಸಂಖ್ಯೆ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದೆ.

ಈ ಉತ್ತರ ಪ್ರದೇಶ ಜನಸಂಖ್ಯೆ(ನಿಯಂತ್ರಣ, ಸ್ಥಿರೀಕರಣ ಹಾಗೂ ಕಲ್ಯಾಣ) ಮಸೂದೆ-2021 ಜಾರಿಯಾದಲ್ಲಿ 2ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಸರ್ಕಾರದ ಉದ್ಯೋಗ, ಸಬ್ಸಿಡಿ, ಮುಂಬಡ್ತಿ ಸೇರಿದಂತೆ ಯಾವುದೇ ಸೌಲಭ್ಯ ಸಿಗುವುದಿಲ್ಲ. ರೇಷನ್ ಕಾರ್ಡ್‍ನ್ನು ಸಹ 4 ಜನರ ಕುಟುಂಬಕ್ಕೆ ಮಾತ್ರ ಸೀಮಿತಗೊಳಿಸಲಾಗುತ್ತದೆ.

ಎರಡು ಮಕ್ಕಳ ನೀತಿಯನ್ನು ಅಳವಡಿಸಿಕೊಂಡ ಸರ್ಕಾರಿ ನೌಕರರಿಗೆ ಸೇವಾವಧಿಯಲ್ಲಿ ಹೆಚ್ಚುವರಿಯಾಗಿ 2 ಭಡ್ತಿ, ವೇತನ, ಭತ್ಯೆಗಳ ಸಹಿತ 12 ತಿಂಗಳು ಪೋಷಕರ ರಜೆ(ಮಾತೃತ್ವ ಅಥವಾ ಪಿತೃತ್ವ ರಜೆ) ಹಾಗೂ ರಾಷ್ಟ್ರೀಯ ಪಿಂಚಣಿ ಯೋಜನೆಯಡಿಯಲ್ಲಿ ಉದ್ಯೋಗಿಗಳ ಕೊಡುಗೆಯಲ್ಲಿನ ಶೇ.3ರಷ್ಟು ಹೆಚ್ಚುವರಿ ಸೌಲಭ್ಯ ಪಡೆಯಬಹುದಾಗಿದೆ. ಅಲ್ಲದೆ ನೀರು, ವಿದ್ಯುತ್ ಹಾಗೂ ಮನೆ ತೆರಿಗೆಯಲ್ಲಿ ಸಹ ರಿಯಾಯಿತಿ ನೀಡಲಾಗುತ್ತದೆ.

ಕಾಯ್ದೆಯನ್ನು ಜಾರಿಗೆ ತರಲು ರಾಜ್ಯ ಜನಸಂಖ್ಯೆ ನಿಧಿಯನ್ನು ಸ್ಥಾಪಿಸಲಾಗುತ್ತದೆ. ಸರ್ಕಾರದ ಕರ್ತವ್ಯಗಳನ್ನು ಇದರಲ್ಲಿ ಪಟ್ಟಿ ಮಾಡಲಾಗಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮೆಟರ್ನಿಟಿ ಕೇಂದ್ರ(ಮಾತೃತ್ವ ಕೇಂದ್ರ)ಗಳನ್ನು ಸ್ಥಾಪನೆ ಮಾಡುವುದರ ಬಗ್ಗೆ ಕರಡು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ. ಈ ಕೇಂದ್ರಗಳಲ್ಲಿ ಹಾಗೂ ಎನ್‍ಜಿಒಗಳಲ್ಲಿ ಕುಟುಂಬ ಯೋಜನೆಗೆ ಅಗತ್ಯವಿರುವ ಗರ್ಭನಿರೋಧಕ ಮಾತ್ರೆಗಳು, ಕಾಂಡೋಮ್‍ಗಳನ್ನು ವಿತರಣೆ ಮಾಡಲಾಗುತ್ತದೆ. ಸಮುದಾಯ ಆರೋಗ್ಯ ಕಾರ್ಯಕರ್ತರ ಮೂಲಕ ಗರ್ಭಧಾರಣೆ, ಹೆರಿಗೆ, ಜನನ ಮತ್ತು ಮರಣಗಳ ನೋಂದಣಿಯನ್ನು ರಾಜ್ಯಾದ್ಯಂತ ಮಾಡಲಾಗುತ್ತದೆ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.

ಒಂದೇ ಮಗುವನ್ನು ಹೊಂದಿದ್ದರೆ 20 ವರ್ಷದವರೆಗೆ ಉಚಿತ ಆರೋಗ್ಯ ಸೇವೆ, ಉಚಿತ ವಿಮೆ. ಅಲ್ಲದೆ ಏಮ್ಸ್ ಸೇರಿದಂತೆ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾತಿಗೆ ಆದ್ಯತೆ. ಪದವಿವರೆಗೆ ಉಚಿತ ಶಿಕ್ಷಣ, ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿವೇತನ, ಹೆಣ್ಣುಮಗಳಾಗಿದ್ದರೆ ಸರ್ಕಾರಿ ಕೆಲಸಕ್ಕೆ ಸೇರಲು ಆದ್ಯತೆ. ಅಲ್ಲದೆ ಒಂದೇ ಮಗುವನ್ನು ಹೊಂದಿದ್ದರೆ ಸೇವಾ ಅವಧಿಯಲ್ಲಿ 4 ಹೆಚ್ಚುವರಿ ಇಂಕ್ರಿಮೆಂಟ್ ನೀಡುವ ಅಂಶಗಳು ಕರಡು ಮಸೂದೆಯಲ್ಲಿವೆ.

ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಒಂದೇ ಮಗು ಇದ್ದರೆ, ಗಂಡು ಮಗುವಾಗಿದ್ದರೆ ಪತ್ನಿಗೆ ಒಂದೇ ಬಾರಿಗೆ 80 ಸಾವಿರ ರೂ. ಅಥವಾ ಹೆಣ್ಣು ಮಗಳಾಗಿದ್ದರೆ 1 ಲಕ್ಷ ರೂ.ಪರಿಹಾರ ನೀಡುವ ಅಂಶವಿದೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...