ಜಿಲ್ಲೆಯ ಕೆ.ಎಂ.ದೊಡ್ಡಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕಪಾಳಮೋಕ್ಷ ಮಾಡಿದ್ದು, ಕಾಂಗ್ರೆಸ್ ಕಾರ್ಯಕರ್ತನಿಗೆ ಅಲ್ಲ, ಬದಲಿಗೆ ಜೆಡಿಎಸ್ ಕಾರ್ಯಕರ್ತನಿಗೆ.
ಈ ವಿಚಾರವನ್ನು ಕಪಾಳಮೋಕ್ಷ ಮಾಡಿಸಿಕೊಂಡ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಲೋಕೇಶ್ ಅವರೇ ಹೇಳಿದ ಮಾತು. “ನಾನು ಜೆಡಿಎಸ್ ಕಾರ್ಯಕರ್ತ ಮತ್ತು ಶಾಸಕ ಡಿ.ಸಿ.ತಮ್ಮಣ್ಣ ಅವರ ಕಟ್ಟಾ ಅಭಿಮಾನಿ”ಎಂದು ಲೋಕೇಶ್ ಸ್ಪಷ್ಟನೆಯನ್ನು ನೀಡಿದ್ದಾರೆ.
“ನಾನು ಡಿಕೆಶಿಯವರ ಅಭಿಮಾನಿ ಕೂಡಾ, ಡಿಕೆಶಿ ಸಾಹೇಬ್ರ ಹೆಗಲಿಗೆ ಕೈಹಾಕಲು ನಾನು ಹೋಗಲಿಲ್ಲ. ಅಷ್ಟು ದೊಡ್ಡವನು ನಾನಲ್ಲ. ಒಂದು ವೇಳೆ ಹೆಗಲಿಗೆ ಕೈಹಾಕಲು ಹೋಗಿದ್ದರೆ ಕ್ಷಮೆಯಾಚಿಸಲು ತಯಾರಿದ್ದೇನೆ”ಎಂದು ಲೋಕೇಶ್ ಹೇಳಿದ್ದಾರೆ.
“ನನ್ನ ಸ್ನೇಹಿತನ ಜೊತೆಗೆ ಮಾದೇಗೌಡ್ರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಹೋಗಿದ್ದೆವು. ಆಗ, ಅಲ್ಲಿಗೆ ಡಿ.ಕೆ.ಶಿವಕುಮಾರ್ ಕೂಡಾ ಬಂದಿದ್ದರು. ಅವರು ಅಲ್ಲಿಂದ ಹೊರಟಾಗ, ನಾವೂ ಅವರ ಜೊತೆಗೂ ಹೊರಗೆ ಬಂದೆವು”ಎಂದು ಲೋಕೇಶ್ ಹೇಳಿದ್ದಾರೆ.
“ನಿನ್ನೆ ನಡೆದ ಘಟನೆ ಡಿ.ಕೆ.ಶಿವಕುಮಾರ್ ಅವರಿಗೆ ಶೋಭೆ ತರುವಂತದ್ದಲ್ಲ. ಇಂತಹ ರೌಡಿಸಂ ಅನ್ನು ಅವರು ಮುಂದಿನ ದಿನಗಳಲ್ಲಿ ಬಿಡಬೇಕು”ಎಂದು ಲೋಕೇಶ್ ಅವರು ಡಿಕೆಶಿಗೆ ಸಲಹೆಯನ್ನು ನೀಡಿದ್ದಾರೆ.
“ಡಿಕೆಶಿಯವರು ಗೂಂಡಾಗಿರಿ ಮಾಡುವುದನ್ನು ಬಿಡಬೇಕು, ಇಲ್ಲಾಂದ್ರೆ ಇದು ಒಂದಲ್ಲಾ ಒಂದು ದಿನ ಅವರಿಗೆ ಮುಳ್ಳಾಗುತ್ತದೆ. ದೂರ ನಿಂತುಕೋ ಎಂದು ನನಗೆ ಹೇಳಬಹುದಾಗಿತ್ತು, ಅದು ಬಿಟ್ಟು ಈ ರೀತಿ ಹೊಡೆಯುವುದು ಅವರಿಗೆ ಶೋಭೆ ತರುವಂತದ್ದಲ್ಲ”ಎಂದು ಲೋಕೇಶ್ ಬೇಸರ ವ್ಯಕ್ತ ಪಡಿಸಿದ್ದಾರೆ.