ನಗರದಲ್ಲಿ ಲಸಿಕೆ ಕೊರತೆ ಸಮಸ್ಯೆ ಮುಂದುವರಿದಿದೆ. ನಗರದ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಜನರು ಕೋವಿಡ್ ಲಸಿಕೆಗಾಗಿ ಮುಗಿ ಬಿದ್ದಿದ್ದಾರೆ.
ಜುಲೈ 11 ರ ಭಾನುವಾರದಂದು ಬೆಳಿಗ್ಗೆ 6:30 ಗಂಟೆಗೆಯೇ ಜನರು ಕೋವಿಡ್ ಲಸಿಕೆಗಾಗಿ ಸರತಿ ಸಾಲಿನಲ್ಲಿ ನಿಂತಿದ್ದರು. ಹಾಗೆಯೇ ಭಾನುವಾರವಾದ ಕಾರಣ ಕೋವಿಡ್ ಲಸಿಕೆಗಾಗಿ ನೂಕು ನುಗ್ಗಲು ಏರ್ಪಟ್ಟಿದೆ.
ಕೊರೊನಾ ಲಸಿಕೆ ಪಡೆಯಲು ಹತ್ತು ಗಂಟೆಗೆ ಟೋಕನ್ ನೀಡಲಾಗುವುದು ಎಂದು ಆಸ್ಪತ್ರೆಯ ಸಿಬ್ಬಂದಿಗಳು ಜನರಿಗೆ ತಿಳಿಸಿದ್ದಾರೆ. ಆದರೆ ಜನರು ಆಸ್ಪತ್ರೆಯ ಸಿಬ್ಬಂದಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಕೆ.ಸಿ.ಜನರಲ್ ಆಸ್ಪತ್ರೆ ಬಳಿ ಮುಂದುವರೆದ ವ್ಯಾಕ್ಸಿನ್ ಗಲಾಟೆ…
ಹಾಗೆಯೇ ಟೋಕನ್ ಪಡೆದವರಿಗೆ ಮಾತ್ರ ಕೋವಿಡ್ ಲಸಿಕೆ ದೊರೆಯುತ್ತದೆ ಎಂದು ಹೇಳಿದ ಕಾರಣ, ಬೆಳಿಗ್ಗೆ 6:30 ಗಂಟೆಯಿಂದಲೇ ಕಾಯುತ್ತಿದ್ದ ಜನರು ಟೋಕನ್ ಪಡೆಯಲು ಮುಗಿಬಿದ್ದಿದ್ದಾರೆ.
ಇನ್ನು ಈಗಾಗಲೇ ಟೋಕನ್ ವಿತರಣೆ ಮಾಡಲಾಗಿದೆ ಎಂದು ಆಸ್ಪತ್ರೆಯ ಸಿಬ್ಬಂದಿಗಳು ಹೇಳಿದ್ದು, ಇಂದು ಯಾಕೆ ಟೋಕನ್ ಕೊಡುತ್ತಿಲ್ಲ ಎಂದು ಜನರು ಆಕ್ರೋಶಿತರಾಗಿದ್ದಾರೆ.
ಪರಿಸ್ಥಿತಿ ಹದಗೆಡುತ್ತಿದ್ದಂತೆ ಮಲ್ಲೇಶ್ವರಂ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಸ್ಥಳದಲ್ಲಿ ಪೊಲೀಸರು ಹಾಗೂ ಜನರ ನಡುವೆ ವಾಗ್ವಾದ ನಡೆದಿದೆ.
ದೇಶದಲ್ಲಿ ಕೊರೊನಾ ಮೂರನೇ ಅಲೆಯ ಎದುರು ನೋಡುತ್ತಿರುವ ಈ ಸಂದರ್ಭದಲ್ಲಿ ಕೊರೊನಾ ಲಸಿಕೆ ನೀಡುವುದು ಅತೀ ಮುಖ್ಯವಾಗಿದೆ. ಕೊರೊನಾ ಲಸಿಕೆ ನೀಡಿಕೆ ಪ್ರಮಾಣ ಹೆಚ್ಚಳವಾಗಿದ್ದರೂ ಡಿಸೆಂಬರ್‌ನ ಒಳಗೆ ಎಲ್ಲರಿಗೂ ಲಸಿಕೆ ನೀಡಬೇಕಾದರೆ ವೇಗ ಇನ್ನಷ್ಟು ಹೆಚ್ಚಬೇಕಾಗಿದೆ. ಈ ನಡುವೆ ಹಲವಾರು ರಾಜ್ಯಗಳಲ್ಲಿ ಕೊರೊನಾ ಲಸಿಕೆ ಕೊರತೆ ಕಾಣಿಸಿಕೊಂಡಿದೆ.