ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯು ಕೊರೊನಾ ರೂಪಾಂತರಗಳ ವಿರುದ್ಧವೂ ಸಮರ್ಥವಾಗಿ ಹೋರಾಡಬಲ್ಲದು ಎಂಬುದಾಗಿ ಮತ್ತೊಂದು ಅಧ್ಯಯನ ಸೋಮವಾರ ತಿಳಿಸಿದೆ.
ಸ್ಪುಟ್ನಿಕ್-ವಿ ಲಸಿಕೆ ಸೇರಿದಂತೆ ಎಲ್ಲಾ ರೀತಿಯ ಎಂಆರ್‌ಎನ್‌ಎ ಲಸಿಕೆಗಳು ಡೆಲ್ಟಾ ರೂಪಾಂತರ ವೈರಸ್ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ನೊವೊಸಿಬಿರ್ಸ್ಕ್ ವಿಶ್ವವಿದ್ಯಾಲಯ ಹಾಗೂ ಪ್ರಯೋಗಾಲಯದ ಮುಖ್ಯಸ್ಥ ಮತ್ತು ರಷ್ಯಾದ ಅಕಾಡೆಮಿ ಆಫ್ ಸೈನ್ಸಸ್ (ಆರ್ಎಎಸ್)ನ ಸದಸ್ಯ ಸೆರ್ಗೆ ನೆಟೆಸೋವ್ ಭಾನುವಾರ ಘೋಷಿಸಿದ್ದರು. ರಷ್ಯಾದ ಗಮಾಲೆಯಾ ನ್ಯಾಷನಲ್ ರಿಸರ್ಚ್ ಇನ್ಸ್ ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿ ಅಭಿವೃದ್ಧಿಪಡಿಸಿದ ಸ್ಟುಟ್ನಿಕ್-ವಿ ಲಸಿಕೆಯು ಕೊವಿಡ್-19ನ ಡೆಲ್ಟಾ ರೂಪಾಂತರ ರೋಗಾಣು ವಿರುದ್ಧ ಶೇ.90ರಷ್ಟು ಸುರಕ್ಷಿತವಾಗಿದೆ ಎಂದು ತಜ್ಞರು ಹೇಳಿದ್ದರು.
ಈ ಬೆನ್ನಲ್ಲೇ ಮತ್ತೊಂದು ಅಧ್ಯಯನ ನಡೆದಿದ್ದು, ಸ್ಪುಟ್ನಿಕ್ ವಿ ಲಸಿಕೆ ಕೊರೊನಾ ರೂಪಾಂತರಗಳ ವಿರುದ್ಧವೂ ಪರಿಣಾಮಕಾರಿಯಾಗಿ ಹೋರಾಡಬಲ್ಲದು ಎಂದು ಗಮಾಲೆಯಾ ನ್ಯಾಷನಲ್ ರಿಸರ್ಚ್ ಇನ್ಸ್ ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿ ಹಾಗೂ ರಷ್ಯಾದ ಡೈರೆಕ್ಟ್ ಇನ್ವೆಸ್ಟ್‌ಮೆಂಟ್ ಫಂಡ್ ಸೋಮವಾರ ಘೋಷಿಸಿವೆ.
ಆಲ್ಫಾ, ಬೆಟಾ, ಗಾಮಾ, ಡೆಲ್ಟಾ ರೂಪಾಂತರಗಳನ್ನು ರಷ್ಯಾದ ಈ ಸ್ಪುಟ್ನಿಕ್ ವಿ ಲಸಿಕೆ ತಟಸ್ಥಗೊಳಿಸಬಲ್ಲದು ಎಂದು ರಷ್ಯಾದ ಡೈರೆಕ್ಟ್ ಇನ್ವೆಸ್ಟ್‌ಮೆಂಟ್ ಫಂಡ್ ಸೆರಾ ಮಾದರಿ ಪರೀಕ್ಷೆಯಲ್ಲಿ ಸಾಬೀತಾಗಿರುವುದಾಗಿ ತಿಳಿಸಿವೆ.
ರೂಪಾಂತರಗಳು ಮೂಲ ಸೋಂಕಿಗಿಂತ ಬಲಿಷ್ಠವಾಗಿದ್ದು, ಹೆಚ್ಚು ಅಪಾಯಕಾರಿಯಾಗಿವೆ. ಈ ರೂಪಾಂತರಗಳ ವಿರುದ್ಧ ಸ್ಪುಟ್ನಿಕ್ ವಿ ಲಸಿಕೆಯ ಒಂದು ಡೋಸ್ ಕೂಡ ಪರಿಣಾಮಕಾರಿಯಾಗಿದೆ ಎಂದು ಆರ್‌ಡಿಐಎಫ್‌ನ ಸಿಇಒ ಕಿರಿಲ್ ಡಿಮಿಟ್ರಿವ್ ತಿಳಿಸಿದ್ದಾರೆ.
ಸ್ಪುಟ್ನಿಕ್ ವಿ ಲಸಿಕೆಯು 67 ದೇಶಗಳಲ್ಲಿ ನೋಂದಣಿಯಾಗಿದೆ. ಭಾರತದಲ್ಲಿ ಕೋವ್ಯಾಕ್ಸಿನ್, ಕೋವಿಶೀಲ್ಡ್ ಲಸಿಕೆ ನಂತರ ಅನುಮೋದನೆ ಪಡೆದ ಮೂರನೇ ಲಸಿಕೆ ಸ್ಪುಟ್ನಿಕ್ ವಿ ಆಗಿದೆ.