ಕೇಂದ್ರ ಸಚಿವ ಪಿಯೂಶ್ ಗೋಯಲ್ ರಾಜ್ಯ ಸಭೆಯಲ್ಲಿ ಆಡಳಿತಾರೂಢ ಬಿಜೆಪಿ ನಾಯಕರಾಗಿ ಆಯ್ಕೆಯಾಗಿದ್ದಾರೆ.
ಥಾವರ್ ಚಂದ್ ಗೆಹ್ಲೋಟ್ ಅವರು ಕಳೆದ ವಾರ ಕರ್ನಾಟಕದ ರಾಜ್ಯಪಾಲರಾಗಿ ನೇಮಕಗೊಂಡ ನಂತರ ಪಿಯೂಷ್ ಗೋಯಲ್ ಅವರನ್ನು ರಾಜ್ಯಸಭಾ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.
ಈ ಮುನ್ನ ರಾಜ್ಯಸಭೆಯಲ್ಲಿ ಬಿಜೆಪಿ ನಾಯಕರನ್ನಾಗಿ ಥಾವರ್ ಚಂದ್ ಗೆಹ್ಲೋಟ್ ಹಾಗೂ ಉಪ ನಾಯಕರನ್ನಾಗಿ ಪಿಯೂಷ್ ಗೋಯಲ್ ಅವರನ್ನು ನೇಮಿಸಲಾಗಿತ್ತು.
2010ರಿಂದ ರಾಜ್ಯ ಸಭಾ ಸದಸ್ಯರಾಗಿರುವ ಪಿಯೂಷ್ ಗೋಯಲ್, ಕೇಂದ್ರ ಸರ್ಕಾರದಲ್ಲಿ ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದರು. ಜುಲೈ 8ರಂದು ವಾಣಿಜ್ಯ, ಕೈಗಾರಿಕೆ, ಆಹಾರ ಹಾಗೂ ಸಾರ್ವಜನಿಕ ಸರಬರಾಜು, ಜವಳಿ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು.
ರಾಜ್ಯ ಸಭಾ ನಾಯಕನ ಸ್ಥಾನಕ್ಕೆ ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರ ಹೆಸರು ಕೇಳಿಬಂದಿತ್ತು. ಇದೀಗ ಪಿಯೂಷ್ ಗೋಯಲ್ ಅವರು ಅಂತಿಮವಾಗಿ ಆಯ್ಕೆಯಾಗಿದ್ದಾರೆ.
ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 19ರಿಂದ ಆರಂಭವಾಗಲಿದ್ದು, ಸಂಸದೀಯ ವ್ಯವಹಾರಗಳ ಸಚಿವಾಲಯ ಈ ಕುರಿತು ಅಧಿಸೂಚನೆ ಹೊರಡಿಸಿದೆ.