ಬೆಂಗಳೂರು: ನಟ ದರ್ಶನ್ ಹೆಸರಿನಲ್ಲಿ ವಂಚನೆ ಯತ್ನ ಪ್ರಕರಣದ ಗೊಂದಲಕ್ಕೆ ಇಂದು ನಿರ್ಮಾಪಕ ಉಮಾಪತಿ ಬನಶಂಕರಿಯಲ್ಲಿ ತೆರೆ ಎಳೆದಿದ್ದಾರೆ.
ಬನಶಂಕರಿ ದೇವಸ್ಥಾನದ ದರ್ಶನ ಮುಗಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ನಿರ್ಮಾಪಕ ಉಮಾಪತಿ ಅವರು, ನಟ ದರ್ಶನ್ ಹೆಸರಲ್ಲಿ 25 ಕೋಟಿ ವಂಚನೆ ಯತ್ನ ಪ್ರಕರಣ ಸಂಬಂಧ ರಾಜಿ ಪ್ರಶ್ನೆಯೇ ಇಲ್ಲ. ಈ ಪ್ರಕರಣದಲ್ಲಿ ಕಾನೂನು ಹೋರಾಟ ಮಾಡುತ್ತೇನೆ. ನಾನು ಪ್ರಕರಣ ಸಂಬಂಧವಾಗಿ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದೇನೆ. ಈ ಕುರಿತು ತನಿಖೆ ನಡೆಯುತ್ತಿದ್ದು, ಕಾನೂನಿನ ರೀತಿಯಲ್ಲಿ ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿದರು.
ಪ್ರಕರಣದಲ್ಲಿ ನನ್ನ ತಪ್ಪು ಇದ್ದಿದ್ರೆ ನಾನು ದೂರು ಕೊಡುತ್ತಿರಲಿಲ್ಲ. ಮೈಸೂರು ಸಿಸಿಬಿ ಕಚೇರಿಗೆ ಹೋಗುತ್ತಿರಲಿಲ್ಲ. ಪ್ರಕರಣದಲ್ಲಿ ನಾನು ಯಾರ ಮೇಲೂ ಆರೋಪ ಮಾಡಿಲ್ಲ. ಅರುಣಾ ಕುಮಾರಿ ಮೇಲೆ ಆರೋಪ ಬಂದಿದೆ ಅದನ್ನು ಅವರು ಕಾನೂನು ರೀತಿಯಲ್ಲಿ ಬಗೆಹರಿಸಿಕೊಳ್ಳಲಿ. ಘಟನೆ ಸಂಬಂಧವಾಗಿ ಜಯನಗರ ಪೊಲೀಸ್ ಹಾಗೂ ಡಿಸಿಪಿ ಜೊತೆ ಮಾತನಾಡಲಾಗಿದೆ. ಈ ಕುರಿತು ನ್ಯಾಯಾಧೀಶರ ಸಲಹೆ ಪಡೆದು ಮುಂದುವರೆಯುತ್ತೇನೆ ಎಂದರು.
ಎಂ.ಜಿ ರೋಡ್‍ನಲ್ಲಿರೋ ಆಸ್ತಿ ವಿಚಾರಕ್ಕೆ ಇಷ್ಟೆಲ್ಲಾ ಆಗುತ್ತಿದೆ ಎಂದು ಮಾತನಾಡಿದ ಅವರು, ನಾವು ಸಿನಿಮಾ ಮಾಡಿದ್ದೇವೆ. ರಿಯಲ್ ಎಸ್ಟೇಟ್ ವ್ಯಾಪಾರ ಮಾಡಿಲ್ಲ. ದರ್ಶನ್ ಸಾರ್ ನನ್ನ ಬ್ಯಾನರ್‍ನಲ್ಲಿ ಒಂದು ಸಿನಿಮಾ ಮಾಡಿದ್ದರು. ಅವರಿಗೆ ಏನು ಕೊಡಬೇಕೋ ಅದನ್ನು ಕೊಟ್ಟಿದ್ದೇನೆ. ಆ ವಿಶ್ವಾಸ ಅವರಿಗೂ ಇದೆ, ನನಗೂ ಇದೆ. ಈ ವಿಚಾರದ ಬಗ್ಗೆ ನಾನು ಮತ್ತೆ ಅವರು ಎಲ್ಲಿಯೂ ಮಾತನಾಡಿಲ್ಲ. ಸುಳ್ಳು ಸುದ್ದಿಗಳಿಗೆ ಉತ್ತರ ನೀಡುವ ಅವಶ್ಯಕತೆ ನನಗಿಲ್ಲ. ಅದಕ್ಕೆ ನಾವು ಜವಾಬ್ದಾರನಲ್ಲ ಎಂದು ಸ್ಪಷ್ಟೀಕರಣ ಕೊಟ್ಟಿದ್ದಾರೆ.