ಭಾರತದ ಆಲ್ ರೌಂಡರ್ ಶಿವಂ ದೂಬೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ತನ್ನ ಬಾಲ್ಯದ ಗೆಳತಿ ಅಂಜುಂ ಖಾನ್ ಅವರನ್ನು ದೂಬೆ ಶುಕ್ರವಾರ (ಜುಲೈ 16) ವರಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಸದ್ಯ ರಾಜಸ್ಥಾನ್ ರಾಯಲ್ಸ್ ಪರ ಆಡುವ ದೂಬೆ ಮದುವೆಯಾಗಿರುವ ಸಂಗತಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಹೇಳಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್ ಖಾತೆಗಳಲ್ಲಿ ಮದುವೆಯ ಫೋಟೋಗಳನ್ನು ಹಾಕಿಕೊಂಡಿರುವ ಶಿವಂ ದೂಬೆ, “ಪ್ರೀತಿಗಿಂತ ಮಿಗಿಲಾದ ಪ್ರೀತಿಯನ್ನು ನಾವಿಬ್ಬರೂ ಪ್ರೀತಿಸುತ್ತಿದ್ದೇವೆ, ಆ ಪ್ರೀತಿ ಇಲ್ಲಿಂದ ಶುರುವಾಗಿದೆ,” ಎಂದು ಬರೆದುಕೊಂಡಿದ್ದಾರೆ.
ದೂಬೆ ಮದುವೆಗೆ ಕ್ರಿಕೆಟರ್‌ಗಳಾದ ಶ್ರೇಯಸ್ ಐಯ್ಯರ್, ಸಿದ್ದೇಶ್ ಲಾಡ್, ಪ್ರಿಯಾಂಕ್ ಪಾಂಚಲ್ ಸೇರಿದಂತೆ ಅನೇಕರು ಶುಭ ಹಾರೈಸಿದ್ದಾರೆ. ಅಂಜುಂ ಖಾನ್ ಕೂಡ ಮದುವೆ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ನವ ಜೋಡಿಗೆ ಆರ್‌ಆರ್ ಕೂಡ ಶುಭ ಕೋರಿ ಟ್ವೀಟ್ ಮಾಡಿದೆ.
28ರ ಹರೆಯದ ಶಿವಂ ದೂಬೆ 1 ಏಕದಿನ ಪಂದ್ಯದಲ್ಲಿ 9 ರನ್, 12 ಟಿ20ಐ ಪಂದ್ಯಗಳಲ್ಲಿ 105 ರನ್, 5 ವಿಕೆಟ್, 21 ಐಪಿಎಲ್ ಪಂದ್ಯಗಳಲ್ಲಿ 314 ರನ್, 4 ವಿಕೆಟ್ ದಾಖಲೆ ಹೊಂದಿದ್ದಾರೆ. ಐಪಿಎಲ್‌ನಲ್ಲಿ ದೂಬೆ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಡುತ್ತಿದ್ದರು.