ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಶಾಪಿಂಗ್ ಹೋಗುವ ಜನರಿಗೆ ಸಿಹಿ ಸುದ್ದಿ. ಶಾಪಿಂಗ್ ಹೊರಟ ಜನರ ಕಾರು ಎಲ್ಲಿ ನಿಲ್ಲಿಸುವುದು? ಎಂಬ ಚಿಂತೆಗೆ ಪರಿಹಾರ ಸಿಗಲಿದೆ.
ಎಲ್ಲೋ ಕಾರು ನಿಲ್ಲಿಸಿ ನಡೆದುಕೊಂಡು ಅಥವ ಆಟೋ ಮೂಲಕ ಸಂಚಾರ ನಡೆಸುವ ಸಮಸ್ಯೆಗೆ ಹರಿಹಾರ ಸಿಗಲಿದೆ. ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಪಾರ್ಕಿಂಗ್ ಸಮಸ್ಯೆ ಬಗೆಹರಿಸಲು ಮುಂದಾಗಿದೆ.
ನಗರದ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸುತ್ತಿರುವ ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಬಹುಹಂತದ ಕಾರು ಪಾರ್ಕಿಂಗ್ ಕಟ್ಟಡ ನಿರ್ಮಾಣ ಮಾಡಲಿದೆ. ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆ ಜಾರಿಗೆ ಬರಲಿದೆ. ಇದಕ್ಕಾಗಿ ಸ್ಥಳ ಗುರುತಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಪಾರ್ಕಿಂಗ್‌ಗಾಗಿ ಕಟ್ಟಡ ನಿರ್ಮಾಣ ಮಾಡುವುದು ಹೊಸ ಯೋಜನೆಯಲ್ಲ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೆಲವು ವರ್ಷಗಳ ಹಿಂದೆ ಈ ಕುರಿತು ಯೋಜನೆ ರೂಪಿಸಿತ್ತು. ಆದರೆ ಖಾಸಗಿಯವರ ಸಹಕಾರ ದೊರೆಯದ ಕಾರಣ ಯೋಜನೆ ಜಾರಿಗೊಂಡಿರಲಿಲ್ಲ.
ಈಗ ಸ್ಮಾರ್ಟ್ ಸಿಟಿ ಯೋಜನೆಯಡಿ ಪಾರ್ಕಿಂಗ್ ಕಟ್ಟಡ ನಿರ್ಮಾಣವಾಗಲಿದೆ. ಅಧಿಕಾರಿಗಳು ಯೋಜನೆಯ ನಕ್ಷೆಯನ್ನು ತಯಾರು ಮಾಡುತ್ತಿದ್ದಾರೆ. ಡಿಪಿಆರ್ ಸಿದ್ಧಗೊಂಡ ಬಳಿಕ ಖಾಸಗಿ ಸಂಸ್ಥೆಗಳನ್ನು ಆಹ್ವಾನಿಸಲಾಗುತ್ತದೆ.
ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಖಾಲಿ ಜಾಗ ಹುಡುಕುವುದು ದೊಡ್ಡ ಸವಾಲಾಗಿದೆ. ರೆಸೆಲ್ ಮಾರ್ಕೆಟ್ ಹಿಂಭಾಗದಲ್ಲಿ ಜಾಗವಿದ್ದು, ಅದನ್ನು ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ಪ್ರತಿದಿನ ಸುಮಾರು 20 ಸಾವಿರ ಜನರು ಕಮರ್ಷಿಯಲ್ ಸ್ಟ್ರೀಟ್‌ಗೆ ಆಗಮಿಸುತ್ತಾರೆ ಎಂದು ಅಂದಾಜಿಸಲಾಗಿದೆ.