ಎರಡನೇ ಒಡಿಐಗೆ ಟೀಮ್ ಇಂಡಿಯಾದಲ್ಲಿ ಬದಲಾವಣೆ?

1
31

ಟೀಮ್ ಇಂಡಿಯಾ ತನ್ನ ‘ಬಿ’ ತಂಡವನ್ನು ಶ್ರೀಲಂಕಾಕ್ಕೆ ಕಳುಹಿಸಿದೆ ಎಂದು ಹೀಯಾಳಿಸಿದವರಿಗೆ ಭಾನುವಾರ ನಡೆದ ಮೊದಲ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಮುಖಭಂಗವಾಗಿದೆ. ಶಿಖರ್‌ ಧವನ್‌ ಸಾರಥ್ಯದ ಯಂಗ್‌ ಇಂಡಿಯಾ, ಆತಿಥೇಯ ಶ್ರೀಲಂಕಾ ತಂಡವನ್ನು 7 ವಿಕೆಟ್‌ಗಳಿಂದ ಬಗ್ಗುಬಡಿದು ಟೀಕಾಕಾರ ಬಾಯಿಗೆ ಬೀಗ ಜಡಿದಿದೆ.


ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಶ್ರೀಲಂಕಾ ತಂಡ ಪ್ರವಾಸಿಗರಿಗೆ 263 ರನ್‌ಗಳ ಸವಾಲಿನ ಗುರಿಯನ್ನೇ ನೀಡಿತು. ಆದರೆ, ಈ ಗುರಿ ಲೆಕ್ಕಕ್ಕೇ ಇಲ್ಲ ಎಂಬ ರೀತಿ ಭರ್ಜರಿ ಬ್ಯಾಟಿಂಗ್‌ ನಡೆಸಿದ ಭಾರತ ತಂಡ 36.4 ಓವರ್‌ಗಳಲ್ಲೇ ಕೇವಲ ಮೂರು ವಿಕೆಟ್‌ಗಳ ನಷ್ಟದಲ್ಲಿ ಮೆಟ್ಟಿನಿಂತು ಆತಿಥೇಯರಿಗೆ ಮರ್ಮಾಘಾತ ನೀಡಿತು.
ಟೀಮ್ ಇಂಡಿಯಾ ಪರ ಯುವ ಬ್ಯಾಟ್ಸ್‌ಮನ್‌ಗಳಾದ ಪೃಥ್ವಿ ಶಾ (43), ಇಶಾನ್‌ ಕಿಶನ್‌ (59) ಮತ್ತು ಸೂರ್ಯಕುಮಾರ್‌ ಯಾದವ್‌ (ಅಜೇಯ 31) ಸ್ಫೋಟಕ ಬ್ಯಾಟಿಂಗ್‌ ನಡೆಸಿ ಲಂಕಾ ಬೌಲರ್‌ಗಳನ್ನು ಚೆಂಡಾಡಿದರೆ, ಸಮಯೋಚಿತ ಆಟವಾಡಿದ ನಾಯಕ ಶಿಖರ್‌ ಧವನ್‌ ಅಜೇಯ 86 ರನ್‌ಗಳಿಸಿ ತಂಡವನ್ನು ಸುಲಭವಾಗಿ ದಡ ಮುಟ್ಟಿಸುವ ಕೆಲಸ ಮಾಡಿದರು.
ಇದೀಗ ಸರಣಿಯ ಎರಡನೇ ಪಂದ್ಯ ಕೂಡ ಕೊಲಂಬೊದ ಆರ್‌ ಪ್ರೇಮದಾಸ ಕ್ರೀಡಾಂಗಣದಲ್ಲೇ ಜುಲೈ 20ರಂದು (ಮಂಗಳವಾರ) ನಡೆಯಲಿದ್ದು, ಬ್ಯಾಕ್‌ ಟು ಬ್ಯಾಕ್‌ ಜಯದೊಂದಿಗೆ ಮೂರು ಪಂದ್ಯಗಳ ಒಡಿಐ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಇರುವಾಗಲೇ ತನ್ನದಾಗಿಸಿಕೊಳ್ಳುವ ಲೆಕ್ಕಾಚಾರದಲ್ಲಿ ಟೀಮ್ ಇಂಡಿಯಾ ಹೆಜ್ಜೆ ಇಟ್ಟಿದೆ.
ಇನ್ನು ಎರಡನೇ ಏಕದಿನ ಪಂದ್ಯಕ್ಕೆ ಭಾರತ ತಂಡದಲ್ಲಿ ಒಂದೆರಡು ಬದಲಾವಣೆ ಆಗುವ ನಿರೀಕ್ಷೆ ಇದೆ. ಏಕೆಂದರೆ ಮೊದಲ ಪಂದ್ಯದಲ್ಲಿ 43 ರನ್‌ ಬಾರಿಸಿದ ಪೃಥ್ವಿ ಶಾ ಔಟ್‌ ಆಗುವ ಮುನ್ನ ತಲೆಗೆ ಬೌನ್ಸರ್‌ ಪೆಟ್ಟು ತಿಂದಿದ್ದರು. ಅವರು ಕನ್ಕಷನ್‌ ಸಮಸ್ಯೆ ಎದುರಿಸದರೆ ದ್ವಿತೀಯ ಒಡಿಐನಲ್ಲಿ ವಿಶ್ರಾಂತಿ ಪಡೆದು ದೇವದತ್‌ ಪಡಿಕ್ಕಲ್ ಓಪನರ್‌ ಆಗಿ ಆಡುವ ಸಾಧ್ಯತೆ ಇದೆ.
ಮಧ್ಯಮ ಕ್ರಮಾಂಕದಲ್ಲಿ ಅನುಭವಿ ಮನೀಶ್‌ ಪಾಂಡೆ ಅವರ ಸ್ಥಾನವೂ ಅತಂತ್ರವಾಗಿದೆ. ಭಾರತ ತಂಡದಲ್ಲಿ ತಮ್ಮ ಸ್ಥಾನ ಉಳಿಸಿಕೊಳ್ಳಲು ಹೋರಾಡುತ್ತಿರುವ ಮನೀಶ್‌ ಮೊದಲ ಒಡಿಐನಲ್ಲಿ ಫಿನಿಷರ್‌ ಕೆಲಸ ನಿಭಾಯಿಸಲು ವಿಫಲರಾದರು. 40 ಎಸೆತಗಳಲ್ಲಿ ತಲಾ ಒಂದು ಫೋರ್ ಮತ್ತು ಸಿಕ್ಸರ್‌ನೊಂದಿಗೆ 26 ರನ್‌ ಗಳಿಸಿದ್ದ ಮನೀಶ್‌, ಅನಗತ್ಯ ಹೊಡೆತಕ್ಕೆ ಕೈಹಾಕಿ ವಿಕೆಟ್‌ ಕೈಚೆಲ್ಲಿದರು. ನಾಲ್ಕನೇ ಕ್ರಮಾಂಕದಲ್ಲಿ ಮನೀಶ್‌ಗೆ ಇನ್ನೊಂದು ಅವಕಾಶ ಸಿಗಬಹುದು. ಆದರೆ, ಮತ್ತೊಮ್ಮೆ ವೈಫಲ್ಯ ಕಂಡರೆ ಭಾರತದ ಒಡಿಐ ತಂಡದ ಕದ ಅವರಿಗೆ ಶಾಶ್ವತವಾಗಿ ಮುಚ್ಚಲಿದೆ.
ಈ ನಡುವೆ ಮೊದಲ ಒಡಿಐಗೂ ಮುನ್ನ ಮಂಡಿ ನೋವಿನ ಸಮಸ್ಯೆ ಎದುರಿಸಿ ಪ್ಲೇಯಿಂಗ್ ಇಲೆವೆನ್‌ನಿಂದ ಹೊರಗುಳಿದ ಅನುಭವಿ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌ ತಮ್ಮ ಫಿಟ್ನೆಸ್‌ ಮರಳಿ ಸಂಪಾದಿಸಿದರೆ, ಇಶಾನ್‌ ಕಿಶನ್‌ ಸ್ಥಾನದಲ್ಲಿ ಆಡುವ ಹನ್ನೊಂದರ ಬಳಗ ಮತ್ತೆ ಸೇರುವ ಸಾಧ್ಯತೆ ಇದೆ. ಅಂದಹಾಗೆ ಪ್ರಥಮ ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡಿರುವ ಕಿಶನ್ ಮೊದಲ ಎಸೆತದಲ್ಲೇ ಸಿಕ್ಸರ್‌ ಬಾರಿಸುವ ಮೂಲಕ 42 ಎಸೆತಗಳಲ್ಲಿ 59 ರನ್‌ ಚೆಚ್ಚಿದ್ದಾರೆ.


ಹೀಗಾಗಿ ಭಾರತ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಗಿಟ್ಟಿಸಲು ಆಟಗಾರರಲ್ಲಿ ಒಂದು ರೀತಿಯ ಆರೋಗ್ಯಕರ ಪೈಪೋಟಿ ಏರ್ಪಟ್ಟಿದ್ದು, ಇದು ಟೀಮ್ ಇಂಡಿಯಾದ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಂತ್ತಿದೆ.

1 COMMENT

LEAVE A REPLY

Please enter your comment!
Please enter your name here