ಪ್ರತಿಷ್ಠಿತ ಟೋಕಿಯೊ ಒಲಿಂಪಿಕ್ಸ್ ಆರಂಭಕ್ಕೆ ಇನ್ನು ಕೇವಲ ನಾಲ್ಕು ದಿನಗಳು ಮಾತ್ರವೇ ಬಾಕಿಯಿದೆ. ಈಗಾಗಲೇ ಹಲವಾರು ದೇಶಗಳ ಕ್ರೀಡಾಪಟುಗಳು ಟೋಕಿಯೋಗೆ ಆಗಮಿಸಿದ್ದು ಅಂತಿಮ ಹಂತದ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಆದರೆ ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟ ಹಿಂದಿನ ಟೂರ್ನಿಗಳಿಗಿಂತ ವಿಭಿನ್ನವಾಗಿರಲಿದೆ. ಅದಕ್ಕೆ ಕಾರಣ ಕೊರೊನಾವೈರಸ್. ಈ ಮಾರಕ ಸಾಂಕ್ರಾಮಿಕ ರೋಗವನ್ನು ದೃಷ್ಟಿಯಲ್ಲಿಟ್ಟುಕೊಂಡು ಟೋಕಿಯೋ ಒಲಿಂಪಿಕ್ಸ್ ಆಯೋಜಕರು ಎಲ್ಲಾ ದೃಷ್ಟಿಕೋನದಿಂದಲೂ ಆಲೋಚಿಸಿ ಕ್ರಮಗಳನ್ನು ಕೈಗೊಂಡಿದ್ದಾರೆ.
ಹೌದು, ಕೊರೊನಾವೈರಸ್‌ನ ಹರಡುವಿಕೆ ತಡೆಗಟ್ಟುವುದು ಆಯೋಜಕರ ಪಾಲಿಗೆ ಅತ್ಯಂತ ಸವಾಲಿನ ಕೆಲಸವಾಗಿದೆ. ಹೀಗಾಗಿ ಸಾಕಷ್ಟು ಮುನ್ನಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇದರಲ್ಲಿ ಒಂದು ಆಟಗಾರರ ಬೆಡ್‌ಗಳ ವ್ಯವಸ್ಥೆ. ಆಟಗಾರರು ಲೈಂಗಿಕ ಚಟುವಟಿಕೆಗಳಲ್ಲಿ ಭಾಗಿಯಾದರೆ ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡಬಹುದು ಎಂಬ ಕಾರಣದಿಂದಾಗಿ ಬೆಡ್‌ಗಳ ವ್ಯವಸ್ಥೆಯಲ್ಲಿ ವಿಚಿತ್ರ ವಿನ್ಯಾಸಗಳನ್ನು ಮಾಡಲಾಗಿದೆ.
ಕ್ರೀಡಾಪಟುಗಳು ಲೈಂಗಿಕ ಚಟುವಟಿಕೆಯಲ್ಲಿ ತೊಡಗದಂತೆ ಮಾಡಲು ಕಡಿಮೆ ಸಾಮರ್ಥ್ಯದ ಸೆಕ್ಸ್ ನಿರೋಧಕ ಹಾಸಿಗೆಗಳನ್ನು ಸಿದ್ಧಪಡಿಸಲಾಗಿದೆ. ರಟ್ಟಿನಿಂದ ಮಾಡಿದ ಹಾಸಿಗೆಗಳನ್ನು ಕ್ರೀಡಾಂಗಣದ ಕ್ರೀಡಾಪಟುಗಳ ಕೋಣೆಗಳಲ್ಲಿ ಇರಿಸಲಾಗಿದೆ. ಆಟಗಾರರ ನಡುವೆ ದೈಹಿಕ ಅಂತರವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಈ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿ ಹಾಸಿಗೆ ಗರಿಷ್ಠ 200 ಕೆಜಿ ತೂಕವನ್ನು ತಡೆದುಕೊಳ್ಳುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದು ಸಂಘಟಕರು ತಮ್ಮ ಹೇಳಿಕೆಯಲ್ಲಿ ಈ ಮೊದಲೇ ತಿಳಿಸಿದ್ದರು.
ಇನ್ನು ಆಯೋಜಕರ ಈ ಕ್ರಮಗಳ ಬಗ್ಗೆ ಸಾಮಾಜಿಕ ಜಾಲತಾಣಗಳನ್ನು ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಕೆಲ ಕ್ರೀಡಾಪಟುಗಳು ಬೆಡ್‌ಗಳ ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಕೆಲವರು ಆಯೋಜಕರ ಈ ಕ್ರಮದ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿದ್ದರೆ ಇನ್ನೂ ಕೆಲವರು ಈ ನಿರ್ಧಾರಕ್ಕೆ ಟೀಕಿಸಿದ್ದಾರೆ.