ಹೊಸದಿಲ್ಲಿ: ಜಾಗತಿಕ ಕಚ್ಚಾ ತೈಲ ದರದಲ್ಲಿ ಪ್ರತಿ ಬ್ಯಾರೆಲ್‌ಗೆ (ಬ್ರೆಂಟ್), ಸೋಮವಾರ 5 ಡಾಲರ್ ಇಳಿಕೆಯಾಗಿದ್ದು, 73 ರಿಂದ 68 ಡಾಲರ್ ಮಟ್ಟಕ್ಕೆ ಇಳಿಕೆಯಾಗಿದೆ. ಈ ನಡುವೆ ಕಳೆದ 2 ದಿನಗಳಿಂದ ಪೆಟ್ರೋಲ್ ದರ ಯಥಾಸ್ಥಿತಿಯಲ್ಲಿದೆ. ಆದರೆ ಕಡಿಮೆಯಾಗಿಲ್ಲ.
ಭಾರತದಲ್ಲಿ ಈ ವರ್ಷ ತೈಲ ದರದಲ್ಲಿ ಶೇ.21.7ರಷ್ಟು ಏರಿಕೆಯಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ಪೆಟ್ರೋಲ್ ದರ 105.25 ರೂ.ನಷ್ಟಿದೆ. ಡೀಸೆಲ್ ದರ ಲೀಟರ್‌ಗೆ 95.26 ರೂ. ಇದೆ. ಜನವರಿ 1ರಿಂದ ಜುಲೈ 9ರ ತನಕ ಒಟ್ಟು 63 ಸಲ ಪೆಟ್ರೋಲ್ ದರ ಏರಿಕೆಯಾಗಿದೆ. ಡೀಸೆಲ್ ದರ 61 ಸಲ ಹೆಚ್ಚಳವಾಗಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಭಾರತದ ಮೊದಲ ಗ್ರೀನ್ ಹೈಡ್ರೋಜನ್ ಉತ್ಪಾದನಾ ಘಟಕವನ್ನು ತನ್ನ ಮಥುರಾ ರಿಫೈನರಿ ಕೇಂದ್ರದಲ್ಲಿ ತೆರೆಯಲಿದೆ. ಭವಿಷ್ಯದ ಇಂಧನ ಬೇಡಿಕೆಯನ್ನು ಪೂರೈಸಲು ತೈಲ ಮತ್ತು ಸ್ವಚ್ಛ ಇಂಧನ ಮೂಲವನ್ನು ಹೊಂದುವುದಾಗಿ ಐಒಸಿ ತಿಳಿಸಿದೆ.
ಕಂಪನಿಯು ರಾಜಸ್ಥಾನದಲ್ಲಿ ಪವನ ವಿದ್ಯುತ್ ಘಟಕವನ್ನು ಹೊಂದಿದ್ದು, ಅಲ್ಲಿ ಉತ್ಪಾದಿಸುವ ವಿದ್ಯುತ್ ಅನ್ನು ಮಥುರಾ ರಿಫೈನರಿಯಲ್ಲಿ ಹೈಡ್ರೋಜನ್ ಉತ್ಪಾದನೆಗೆ ಬಳಸಿಕೊಳ್ಳಲಾಗುವುದು.