ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿ ಸುಪ್ರೀಂಕೋರ್ಟ್ ಸೋಮವಾರ ಆದೇಶ ಹೊರಡಿಸಿದೆ.
ಇನ್ನುಮುಂದೆ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಮದ್ಯದಂಗಡಿಗಳನ್ನು ತೆರೆಯಲು ಯಾವುದೇ ಕಾರಣಕ್ಕೂ ಪರವಾನಗಿ ನೀಡಬಾರದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಹೆದ್ದಾರಿಗಳಿಂದ 500 ಮೀಟರ್ ಅಂತರದೊಳಗೆ ಯಾವುದೇ ಮದ್ಯದಂಗಡಿಗಳೂ ಇರುವಂತಿಲ್ಲ ಎಂದು ಆದೇಶಿಸಲಾಗಿದೆ. ಅಂತೆಯೇ, ಸ್ಥಳೀಯ ಆಡಳಿತದ ವ್ಯಾಪ್ತಿಯಲ್ಲಿರುವ ಹಾಗೂ 20,000ಕ್ಕಿಂತ ಕಡಿಮೆ ಜನರು ವಾಸ ಮಾಡುವ ಸ್ಥಳಗಳಲ್ಲಿರುವ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಅಕ್ಕಪಕ್ಕದ 220 ಮೀಟರ್ ವ್ಯಾಪ್ತಿಯೊಳಗೆ ಯಾವುದೇ ರೀತಿಯ ಮದ್ಯವನ್ನು ಮಾರಾಟ ಮಾಡುವಂತಿಲ್ಲ ಎಂದೂ ತಿಳಿಸಿದೆ.
ಹೀಗಾಗಿ, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ರಾಷ್ಟ್ರೀಯ ಹೆದ್ದಾರಿಗಳ ಅಕ್ಕಪಕ್ಕದಲ್ಲಿ ಎಷ್ಟು ಮದ್ಯದಂಗಡಿಗಳಿವೆ, ಎಷ್ಟು ಮದ್ಯದಂಗಡಿಗಳನ್ನು ತೆರವುಗೊಳಿಸಬೇಕೆಂಬ ಬಗ್ಗೆ ಯಾವುದೇ ಅಂಕಿ-ಅಂಶಗಳನ್ನು ಕಲೆಹಾಕಿಲ್ಲ. ಈ ಕೆಲಸವನ್ನು ಆಯಾ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳು ಮಾಡಲಿವೆ.
ಸುಪ್ರೀಂ ಕೋರ್ಟ್ನಿಂದ ಈ ಆದೇಶ ಘೋಷಣೆಯಾದ ಹಿನ್ನೆಲೆಯಲ್ಲಿ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಎಲ್ಲ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಈ ಬಗ್ಗೆ ಆದೇಶವನ್ನು ಕಳುಹಿಸಿದೆ.