“ಇಲ್ಲಿ ಕೇಳ್ರಪ್ಪ, ನಮ್ಮಲ್ಲಿ ಬಾಂಬೆ ಟೀಮ್ ಇಲ್ಲ, ಯಾವ್ ಟೀಮೂ ಇಲ್ಲ. ರೈತರ ಬಗ್ಗೆ ಕೇಳಿ,” ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಪತ್ರಕರ್ತರಿಗೆ ಟಾಂಗ್ ನೀಡಿದರು.

ಬೆಳೆ ಸಮೀಕ್ಷೆಗೆ ಮಂಗಳವಾರ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೆ.ಆರ್. ಹಳ್ಳಿ ಗೇಟ್ ಬಳಿ ಆಗಮಿಸಿದ್ದ ಬಿ.ಸಿ. ಪಾಟೀಲ್ ಸುದ್ದಿಗಾರರ ಜತೆ ಮಾತನಾಡಿದರು. “ನಮ್ಮಲ್ಲಿ ಯಾವ ಟೀಮ್ ಇಲ್ಲ. ನಾಲ್ಕು ಜನ ಸೇರಿದರೆ ಏನೋ ನಡೆಯುತ್ತದೆ ಎನ್ನುತ್ತೀರಿ. ಆಗ ಸರ್ಕಾರ ತೆಗೆಯಬೇಕಿತ್ತು, ಎಲ್ಲರೂ ಒಟ್ಟಾಗಿ ಇದ್ದೆವು. ಸರ್ಕಾರ ತೆಗೆದ ಬಳಿಕ ಸರ್ಕಾರ ರಚನೆ ಆಗಿದೆ. ಅವರವರಿಗೆ ವಹಿಸಿದ ಕೆಲಸವನ್ನು ಮಾಡುತ್ತಿದ್ದೇವೆ. ನಾನೇನು ಅವರನ್ನೆಲ್ಲ ಬೆಳೆ ಸಮೀಕ್ಷೆಗೆ ಕರೆದುಕೊಂಡು ಬರಬೇಕಾ,” ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು.
“ಒಬ್ಬರೂ, ಇಬ್ಬರಿಗೆ ಬಿಟ್ಟರೇ ಯಾರಿಗೂ ಅನ್ಯಾಯ ಆಗಿಲ್ಲ, ಎಲ್ಲಾ ಸರಿ ಹೋಗುತ್ತದೆ. ಒಂದು ಮನೆಯಲ್ಲೇ ಎಲ್ಲವೂ ಸರಿ ಇರುವುದಿಲ್ಲ. ತಂದೆ- ತಾಯಿ ಸರಿ ಮಾಡುವ ಆಶಾ ಭಾವನೆ ಇದೆ. ನೋಡಿ, ಸರ್ಕಾರಕ್ಕೆ ಏನೇನು ಆಗಲ್ಲ. ಮುಂದೆಯೂ ನಾವು ಅಧಿಕಾರಕ್ಕೆ ಬರುತ್ತೇವೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.