ಅಫ್ಘಾನಿಸ್ತಾನ ಸಂಪೂರ್ಣವಾಗಿ ತಾಲಿಬಾನ್ ಉಗ್ರರ ವಶವಾಗಿದೆ. ಕಾಬೂಲ್ ಸೇರಿದಂತೆ ವಿವಿಧ ಪ್ರದೇಶದಲ್ಲಿ ಹಿಂಸಾಚಾರಗಳು ನಡೆಯುತ್ತಿರುವ ಬಗ್ಗೆ ವರದಿಗಳು ಬರುತ್ತಿವೆ. ತಾಲಿಬಾನ್ ಪರವಾಗಿ ಸ್ಟೇಟಸ್ ಹಾಕಿದ ಕರ್ನಾಟಕದ ಯುವಕನಿಗೆ ಸಂಕಷ್ಟ ಎದುರಾಗಿದೆ.
ಬಾಗಲಕೋಟೆಯ ಆಸೀಫ್ ಗಲಗಲಿ ಎಂಬ ಯುವಕ ಫೇಸ್ ಬುಕ್‌ನಲ್ಲಿ ‘ಐ ಲವ್ ತಾಲಿಬಾನಿ’ ಎಂದು ಸ್ಟೇಟಸ್ ಹಾಕಿದ್ದಾನೆ. ಈಗ ಮುಸ್ಲಿಂ ಸಮುದಾಯದ ಯುವಕರೇ ಆಸೀಫ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಕರಣ ದಾಖಲಿಸಿ ಬಂಧಿಸಿ ಎಂದು ಒತ್ತಾಯಿಸಿದ್ದಾರೆ.
ಆಸೀಫ್ ಗಲಗಲಿ ಹಾಕಿದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಲವಾರು ಜನರು ಆಸೀಫ್ ಬಂಧನಕ್ಕೆ ಒತ್ತಾಯ ಮಾಡುತ್ತಿದ್ದಾರೆ. ಸದ್ಯ ಆಸೀಫ್ ಪರಾರಿಯಾಗಿದ್ದು, ಶುಕ್ರವಾರ ಸಂಜೆಯ ತನಕವೂ ಪ್ರಕರಣ ದಾಖಲಾಗಿಲ್ಲ. ಜಮಖಂಡಿಯ ಪೊಲೀಸರು ಆಸೀಫ್ ಗಲಗಲಿ ಪೋಷಕರು, ಸಂಬಂಧಿಗಳನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಆಸೀಫ್‌ಗಾಗಿ ಹುಡುಕಾಟ ಮುಂದುವರೆದಿದೆ. ಮುಸ್ಲಿಂ ಸಮುದಾಯದ ಯುವಕರೇ ಆಸೀಫ್ ತರಾಟೆಗೆ ತೆಗೆದುಕೊಂಡು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.