ಶ್ರಾವಣ ಮಾಸದ ಎರಡನೇ ಶುಕ್ರವಾರ ದಿನವಾದ ಇಂದು (ಆ.20) ವರಮಹಾಲಕ್ಷ್ಮೀ ಹಬ್ಬವನ್ನು ರಾಜ್ಯದೆಲ್ಲೆಡೆ ಬಹಳ ಸಡಗರ ಸಂಭ್ರಮದಿಂದ ಜನರು ಆಚರಿಸುತ್ತಿದ್ದಾರೆ.

ಹಬ್ಬದ ವಿಶೇಷ ದಿನವಾದ ಶುಕ್ರವಾರ ಮೈಸೂರು ಜಿಲ್ಲೆಯ ಚಾಮುಂಡಿ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿರುವುದರಿಂದ ಇಂದಿನಿಂದ ಮೂರು ದಿನಗಳ ಕಾಲ ಚಾಮುಂಡಿ ಬೆಟ್ಟಕ್ಕೆ ಪ್ರವೇಶವನ್ನು ನಿಷೇಧಿಸಲಾಗಿದೆ. ವಾರಾಂತ್ಯ ದಿನಗಳಾದ ಶನಿವಾರ ಮತ್ತು ಭಾನುವಾರವೂ ಜಿಲ್ಲಾಡಳಿತದ ಸೂಚನೆಯಂತೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ವರಮಹಾಲಕ್ಷ್ಮೀ ಹಬ್ಬದ ದಿನ ಸಾಮಾನ್ಯವಾಗಿ ಚಾಮುಂಡೇಶ್ವರಿ ದೇವಿಯ ದರ್ಶನಕ್ಕಾಗಿ ಹೆಚ್ಚಾಗಿ ಭಕ್ತರು ಬರುತ್ತಾರೆ. ಈ ವಿಶೇಷ ದಿನದಂದು ನಾಡದೇವತೆ ಚಾಮುಂಡೇಶ್ವರಿ ದರ್ಶನ ಪಡೆಯಬೇಕೆಂಬುದು ಭಕ್ತರ ಆಶಯವಾಗಿರುತ್ತದೆ.
ಚಾಮುಂಡಿ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವ ಕಾರಣ ಕೊರೊನಾ ಮುನ್ನೆಚ್ಚರಿಕಾ ಕ್ರಮವಾಗಿ ಮೈಸೂರು ಜಿಲ್ಲಾಡಳಿತ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಿದೆ. ಈಗಾಗಲೇ ಕೊರೊನಾ ಸೋಂಕಿನ ಕಾರಣದಿಂದ ವೀಕೆಂಡ್ ಕರ್ಫ್ಯೂ ಹಾಗೂ ಭಾನುವಾರ ಬೆಟ್ಟಕ್ಕೆ ನಿರ್ಬಂಧ ಹೇರಲಾಗಿದೆ. ಜೊತೆಗೆ ಶ್ರಾವಣ ಶನಿವಾರ ಹಿನ್ನಲೆ ಚಿಕ್ಕ ತಿರುಪತಿ ಎಂದೇ ಪ್ರಸಿದ್ಧಿಯಾಗಿರುವ ವಿವಿಪುರಂನ ವೆಂಕಟೇಶ್ವರ ಸ್ವಾಮಿ ದೇಗುಲಕ್ಕೂ ಪ್ರವೇಶವನ್ನು ನಿಷೇಧಿಸಲಾಗಿದೆ.