ಪಾನಿಪುರಿ ಇಷ್ಟಪಡದೇ ಇರೋರು ಯಾರಿದ್ದಾರೆ ಹೇಳಿ..? ಮಕ್ಕಳಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಬ್ಬರೂ ಪಾನಿಪುರಿಯ ಲವರ್ಸ್ ಆಗಿರ್ತಾರೆ. ಅದರಲ್ಲೂ ಕೆಲವರಿಗೆ ಪಾನಿಪುರಿ ಕಂಡರೆ ಸಾಕು ಬೇಡ ಬೇಡ ಅಂದರೂ ಬಾಯಲ್ಲಿ ನೀರು ಬಂದೇ ಬಿಡುತ್ತೆ. ಆದ್ರೆ ಹೀಗೆ ಬಾಯಿ ಚಪಲ ತೀರಿಸಿಕೊಳ್ಳುವ ಅವಸರದಲ್ಲಿ ಕಂಡ ಕಂಡ್ಕಡೆ ಪಾನಿಪುರಿ ತಿನ್ನಲು ಹೋಗದಿರಿ. ಯಾಕಂದ್ರೆ ಪಾನಿಪುರಿ ವ್ಯಾಪಾರಿ ಅದರಲ್ಲಿ ಏನು ಬೇಕಾದ್ರೂ ಹಾಕಿ ಕೊಡ್ತಾನೆ ಅಂತಿದೆ ಈ ವಿಡಿಯೋ. ಅಷ್ಟಕ್ಕೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ಸಂಚಲನ ಸೃಷ್ಟಿಸಿದೆ.
‘ಗೋಲ್ ಗಪ್ಪ’ ವ್ಯಾಪಾರಿ ಮಗ್‌ನಲ್ಲಿ ಮೂತ್ರ ವಿಸರ್ಜಿಸಿ ಮೂತ್ರವನ್ನು ನೀರಿಗೆ ಮಿಕ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಅಷ್ಟೇ ಅಲ್ಲ ಕಣ್ರೀ ಅದೇ ಮೂತ್ರ ಚೆಲ್ಲಿದ್ದ ನೀರನ್ನೇ ಪಾನಿಪುರಿಯ ತಯಾರಿಕೆಗೂ ಬಳಸಿದ್ದಾನೆ ಆ ಮನುಷ್ಯ. ಇವನ ವಿಕೃತ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಶೇರ್ ಮಾಡುತ್ತಿರುವ ಜನ ವಿಕೃತ ವ್ಯಾಪಾರಿಯ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಅಂದಹಾಗೆ ಈ ಘಟನೆ ನಡೆದಿರೋದು ಅಸ್ಸಾಂನ ಗುವಾಹಟಿಯಲ್ಲಿ. ಇದು ಗೌಹಾಟಿಯ ಆಫ್ ಏಯ್ಟ್ ಗಾನ್ ಪ್ರದೇಶದಲ್ಲಿ ಬಯಲಾದ ಘಟನೆ. ಇನ್ನು ಈ ವಿಡಿಯೋ ಪೊಲೀಸರ ಗಮನಕ್ಕೆ ಬರುತ್ತಿದ್ದಂತೆ ವಿಕೃತ ವ್ಯಾಪಾರಿ ಅರೆಸ್ಟ್ ಆಗಿದ್ದಾನೆ. ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಮತ್ತೊಂದ್ಕಡೆ ಈತನ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ದೇಶಾದ್ಯಂತ ಪಾನಿಪುರಿ ವ್ಯಾಪಾರಿಯ ಈ ವಿಕೃತ ಬುದ್ಧಿಯ ಬಗ್ಗೆ ಚರ್ಚೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.