ದೇಶಾದ್ಯಂತ ಮುಂಗಾರು ಚುರುಕಾಗಿದ್ದು, ಆಗಸ್ಟ್ 26ರವರೆಗೂ ಕೆಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುವುದಾಗಿ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉತ್ತರಾಖಂಡ ಹಾಗೂ ಉತ್ತರ ಪ್ರದೇಶದಲ್ಲಿ ಅಧಿಕ ಮಳೆಯಾಗುವುದಾಗಿ ತಿಳಿಸಿದೆ. ಸೋಮವಾರದಿಂದ ಈ ಎರಡು ರಾಜ್ಯಗಳಲ್ಲಿ ಮಳೆ ಹೆಚ್ಚಾಗಿ ಆಗಸ್ಟ್ 26ರವರೆಗೂ ಅಧಿಕ ಮಳೆ ಮುಂದುವರೆಯುವ ಸಾಧ್ಯತೆಯಿರುವುದಾಗಿ ತಿಳಿಸಿದೆ. ಸೋಮವಾರದಿಂದ ವಾಯವ್ಯ ಭಾರತದಲ್ಲಿ ಮಳೆ ಪ್ರಮಾಣ ತಗ್ಗುವುದಾಗಿ ತಿಳಿಸಿದೆ. ಪಂಜಾಬ್, ಹರಿಯಾಣ, ರಾಜಸ್ಥಾನ ಹಾಗೂ ಹಿಮಾಚಲ ಪ್ರದೇಶದಲ್ಲಿ ಚದುರಿದ ಮಳೆ ಮುಂದುವರೆಯುವುದಾಗಿ ಸೂಚಿಸಿದೆ.
ಪೂರ್ವ ಹಾಗೂ ಪಶ್ಚಿಮ ರಾಜಸ್ಥಾನ, ಪಂಜಾಬ್, ಹರಿಯಾಣ, ಪಶ್ಚಿಮ ಉತ್ತರ ಪ್ರದೇಶದಲ್ಲಿ ಸೋಮವಾರ ಅಧಿಕ ಮಳೆಯಾಗಲಿದೆ. ಮುಂದಿನ ನಾಲ್ಕೈದು ದಿನಗಳ ಕಾಲ ಉತ್ತರಾಖಂಡ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶದಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.
ದೆಹಲಿಯಲ್ಲಿ ಶುಕ್ರವಾರದಿಂದ ಮತ್ತೆ ಹೆಚ್ಚಿನ ಮಳೆಯಾಗುತ್ತಿದೆ. ಸ್ವಲ್ವ ದಿನಗಳ ಕಾಲ ಬಿಡುವು ಪಡೆದುಕೊಂಡಿದ್ದ ಮಳೆ ಮತ್ತೆ ಆರಂಭವಾಗಿದೆ. ಗುರುಗ್ರಾಮ, ನೊಯ್ಡಾ, ಆಜಾದ್‌ಪುರ, ಕನ್ನೌಟ್‌ನಲ್ಲಿ ಅತಿ ಹೆಚ್ಚಿನ ಮಳೆ ದಾಖಲಾಗಿದೆ. ಶನಿವಾರ ಒಂದೇ ದಿನದಲ್ಲಿ ದೆಹಲಿಯಲ್ಲಿ 138.8 ಎಂಎಂ ಮಳೆಯಾಗಿದ್ದು, ಈ ಅವಧಿಯಲ್ಲಿ ದಾಖಲಾದ ಅತಿ ಹೆಚ್ಚಿನ ದಿನನಿತ್ಯದ ಮಳೆ ಪ್ರಮಾಣ ಇದಾಗಿದೆ. ಭಾರೀ ಮಳೆಯಿಂದಾಗಿ ದೆಹಲಿಯಲ್ಲಿ ಹಲವು ಪ್ರದೇಶಗಳು, ರಸ್ತೆಗಳು ಜಲಾವೃತವಾಗಿ ಜನಜೀವನ ಅಸ್ತವ್ಯಸ್ತವಾಗಿದೆ.