ತರಕಾರಿ ವಾಹನದಲ್ಲಿ 102 ಕೆ.ಜಿ ಗಾಂಜಾವನ್ನು ಸಾಗಿಸುತ್ತಿದ್ದ ಖತರ್ನಾಕ್ ಖದೀಮರನ್ನು ಕಾಫಿನಾಡು ಚಿಕ್ಕಮಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಖಚಿತ ಮಾಹಿತಿ ಮೆರೆಗೆ ಸೆನ್ (CEN) ಪೊಲೀಸ್ ಇನ್ಸ್‌ಪೆಕ್ಟರ್ ರಕ್ಷಿತ್ ನೇತೃತ್ವದಲ್ಲಿ ದಾಳಿ ನಡೆಸಿದ ಖಾಕಿ ಪಡೆ, ಚಿಕ್ಕಮಗಳೂರು ತಾಲ್ಲೂಕಿನ ಕರ್ತಿಕೆರೆ ಬಳಿ ಆರೋಪಿಗಳನ್ನು ಲಾಕ್ ಮಾಡಿದೆ. ಚಿಕ್ಕಮಗಳೂರು ಪೊಲೀಸ್ ಇತಿಹಾಸದಲ್ಲೇ ದೊಡ್ಡ ಮಟ್ಟದ ಕಾರ್ಯಾಚರಣೆ ಇದಾಗಿದ್ದು, ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸರನ್ನು ಚಿಕ್ಕಮಗಳೂರು ಎಸ್ಪಿ ಅಕ್ಷಯ್ ಶ್ಲಾಘಿಸಿದ್ದಾರೆ.
ಈ ರೀತಿಯ ಗಾಂಜಾ ರೇಡ್ ಇದು ಮೊದಲೆನಲ್ಲ. ಈ ಹಿಂದೆಯೂ ಹಲವಾರು ದಾಳಿ ನಡೆಸಿ ಪೊಲೀಸರು ಗಾಂಜಾ ಮಾಲು ಸಮೇತ ಆರೋಪಿಗಳನ್ನು ಬಂಧಿಸಿದ್ದರು. ಆದರೆ ಇದು ದೊಡ್ಡಮಟ್ಟದ ಕಾರ್ಯಾಚರಣೆಯಾಗಿದ್ದು, ಈ ಹಿಂದೆ ಬಂಧನ ಮಾಡಿದ ಆರೋಪಿಗಳಿಂದ ಪಡೆದ ಮಾಹಿತಿ ಹಾಗೂ ಈ ಗಾಂಜಾ ಖರೀದಿಯಲ್ಲಿ ಯಾರ್ಯಾರು ಭಾಗಿಯಾಗುತ್ತಾರೆ ಅನ್ನುವ ಮಾಹಿತಿಯನ್ನು ಪಡೆದ ಪೊಲೀಸರು, ಆ ವ್ಯಕ್ತಿಗಳ ಚಲನ- ವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದರು.
ಚಿಕ್ಕಬಳ್ಳಾಪುರದ ಇಬ್ಬರು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಗಾಂಜಾವನ್ನು ದೊಡ್ಡ ಮಟ್ಟದಲ್ಲಿ ಡೀಲ್ ಮಾಡಿಕೊಂಡು ಅದನ್ನು ನಮ್ಮ ರಾಜ್ಯಕ್ಕೆ ಸಾಗಿಸುತ್ತಿದ್ದರು ಎಂಬ ಮಾಹಿತಿಯನ್ನು ಅರಿತ ಪೊಲೀಸರು ಆರೋಪಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ನಿನ್ನೆ ಕೂಡ ವಿಶಾಖಪಟ್ಣಣದಿಂದ ಗಾಂಜಾ ಲೋಡ್ ಆಗಿ ಬರುತ್ತಿದ್ದ ಮಾಹಿತಿಯನ್ನು ಖಚಿತ ಪಡಿಸಿಕೊಂಡು ಆರೋಪಿಗಳ ಸಮೇತ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ