ದೇಶದಲ್ಲಿ ಸೆಪ್ಟೆಂಬರ್ ವೇಳೆಗೆ ಕೊರೊನಾ ಮೂರನೇ ಅಲೆ ಕಾಣಿಸಿಕೊಳ್ಳುವ ಎಚ್ಚರಿಕೆಯನ್ನು ಕೆಲವು ತಜ್ಞರು ಈ ಮುನ್ನವೇ ನೀಡಿದ್ದು, ಸೆಪ್ಟೆಂಬರ್ ಕಾಲಿಡುತ್ತಿದ್ದಂತೆ ಇದೀಗ ಆತಂಕ ಎದುರಾಗಿದೆ. ಎರಡು ದಿನಗಳ ಹಿಂದೆ ದೇಶದಲ್ಲಿ ಏಕಾಏಕಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದುದು ಈ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.
ಆದರೆ ಕೊರೊನಾ ಸೋಂಕಿನ ಹೊಸ ರೂಪಾಂತರ ಸೃಷ್ಟಿಯಾಗದೇ ಇದ್ದರೆ, ಎರಡನೇ ಅಲೆಯಂತೆ ಮೂರನೇ ಅಲೆ ಭೀಕರ ಸ್ವರೂಪ ಪಡೆಯುವ ಸಾಧ್ಯತೆ ಇಲ್ಲ ಎಂಬ ಸಮಾಧಾನಕರ ಸಂಗತಿಯನ್ನು ಸಾಂಕ್ರಾಮಿಕ ರೋಗಶಾಸ್ತ್ರಜ್ಞರಾದ ಡಾ. ಗಗನ್‌ದೀಪ್ ಕಂಗ್ ಹೇಳಿದ್ದಾರೆ. ದೇಶದಲ್ಲಿ ಬಹುಪಾಲು ಜನಸಂಖ್ಯೆ ಈಗಾಗಲೇ ಸೋಂಕಿಗೆ ತುತ್ತಾಗಿದೆ ಹಾಗೂ ಬಹಳಷ್ಟು ಜನರು ಕೊರೊನಾ ಸೋಂಕಿನ ವಿರುದ್ಧ ಲಸಿಕೆ ಪಡೆದಿದ್ದಾರೆ. ಹೀಗಾಗಿ ಮೂರನೇ ಅಲೆ ಗಂಭೀರ ಸ್ವರೂಪ ಪಡೆಯುವ ಸಾಧ್ಯತೆ ಕಡಿಮೆ ಇದೆ’ ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ಕೊರೊನಾ ಲಸಿಕೆ ನೀಡುವ ಕಾರ್ಯವೂ ಚುರುಕಾಗಿ ಸಾಗುತ್ತಿದೆ. ಜನರನ್ನು ಸೋಂಕಿನಿಂದ ರಕ್ಷಣೆ ಮಾಡಲು ಇದೇ ವೇಗದಲ್ಲಿ ಇನ್ನಷ್ಟು ದಿನ ಮುಂದುವರೆಯಬೇಕಿದೆ’ ಎಂದು ಸಲಹೆ ನೀಡಿದ್ದಾರೆ.
‘ಕೊರೊನಾ ಮೂರನೇ ಅಲೆ ಕುರಿತು ಹಲವು ತಜ್ಞರು ನೀಡುತ್ತಿರುವ ಮಾದರಿಗಳು ಊಹೆಗಳಂತಿವೆ ಹಾಗೂ ಈ ಊಹೆಗಳು ಕೊರೊನಾ ಮೂರನೇ ಅಲೆಯ ಸಾಧ್ಯತೆಯನ್ನು ತಿಳಿಸುತ್ತಿವೆ. ಆದರೆ ಇದಕ್ಕೆ ದತ್ತಾಂಶಗಳು ಎಲ್ಲಿಂದ ದೊರೆಯುತ್ತಿವೆ ಎನ್ನುವ ಮಾಹಿತಿಯಿಲ್ಲ’ ಎಂದು ಪ್ರಶ್ನಿಸಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಕೊರೊನಾ ಮೂರನೇ ಅಲೆ ಆರಂಭವಾಗಿ, ಅಕ್ಟೋಬರ್ ವೇಳೆಗೆ ಉತ್ತುಂಗ ತಲುಪಲಿದೆ. ಲಸಿಕಾ ಪ್ರಕ್ರಿಯೆ ಚುರುಕುಗತಿಯಲ್ಲಿ ನಡೆಯದೇ ಇದ್ದರೆ, ದೇಶದಲ್ಲಿ ದಿನನಿತ್ಯ ಆರು ಲಕ್ಷ ಹೊಸ ಪ್ರಕರಣಗಳು ದಾಖಲಾಗಲಿವೆ ಎಂದು ಕೆಲವು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಅಭಿಪ್ರಾಯಗಳ ಬೆನ್ನಲ್ಲೇ ಗಗನ್‌ದೀಪ್ ಈ ಹೇಳಿಕೆ ನೀಡಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ರಚಿಸಿದ ತಜ್ಞರ ಸಮಿತಿಯು, ಮೂರನೇ ಅಲೆಯಲ್ಲಿ ಮಕ್ಕಳಿಗೆ ಕೊರೊನಾ ಸೋಂಕಿನ ಸಾಧ್ಯತೆ ಇರುವುದರಿಂದ ಮಕ್ಕಳ ಚಿಕಿತ್ಸೆಗೆ ಸೌಲಭ್ಯಗಳು, ವೈದ್ಯರು, ವೆಂಟಿಲೇಟರ್‌ಗಳು, ಆಂಬುಲೆನ್ಸ್‌ಗಳು ಮುಂತಾದ ಸಾಧನಗಳನ್ನು ಸಿದ್ಧವಾಗಿಟ್ಟುಕೊಳ್ಳಲು ಸೂಚಿಸಲಾಗಿದ್ದು, ಪ್ರಧಾನಿ ಕಚೇರಿಗೆ ವರದಿ ಸಲ್ಲಿಸಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಸೂಚನೆ
ಇದರೊಂದಿಗೆ, ದೇಶದಲ್ಲಿ ಹಬ್ಬಗಳು ಸಮೀಪಿಸಿದ್ದು, ಕೇಂದ್ರ ಆರೋಗ್ಯ ಸಚಿವಾಲಯ ಕೊರೊನಾ ಸೋಂಕಿನ ಹರಡುವಿಕೆ ಕುರಿತು ಜನರಿಗೆ ಎಚ್ಚರಿಕೆ ನೀಡಿದೆ. ಜನರು ತಮ್ಮ ತಮ್ಮ ಮನೆಗಳಲ್ಲೇ ಹಬ್ಬ ಆಚರಿಸಿ. ಕೊರೊನಾ ನಿಯಮಗಳನ್ನು ಪಾಲಿಸಿ ಹಾಗೂ ಕೊರೊನಾ ಲಸಿಕೆಗಳನ್ನು ಪಡೆದುಕೊಳ್ಳಿ ಎಂದು ಸೂಚನೆ ನೀಡಿದೆ.